ಬೆಂಗಳೂರು: ರಾಜರಾಜೇಶ್ವರಿ ಉಪಚುನಾವಣೆ ಮುಂದೂಡುವಂತೆ ಕೋರಿ ಬಿಜೆಪಿ ಟಿಕೆಟ್ ಆಕಾಂಕ್ಷಿ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ತುಳಸಿ ಮುನಿರಾಜು ಹಾಗೂ ಮುನಿರತ್ನ ಇವರಿಬ್ಬರಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುದೇ ಗೊಂದಲದ ವಿಚಾರವಾಗಿತ್ತು. ಮುನಿರತ್ನ ಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಲವು ಸಚಿವರು ಇದ್ದರೆ, ಮುನಿರಾಜು ಪರ ಆರ್ಎಸ್ಎಸ್ ಹಿರಿಯ ಮುಖಂಡರು ಲಾಬಿ ನಡೆಸುತ್ತಿದ್ದಾರೆ.
ಹೀಗಾಗಿ ಟಿಕೆಟ್ ಘೋಷಣೆಯಲ್ಲಿ ವಿಳಂಬವಾಗುತ್ತಿದ್ದು ತುಳಸಿ ಮುನಿರಾಜು ಉಪಚುನಾವಣೆ ಮುಂದೂಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ. ಹೀಗಾಗಿ, ನಿಗದಿಯಂತೆ ನವೆಂಬರ್ 3 ರಂದು ಆರ್.ಆರ್.ನಗರ ಬೈ-ಎಲೆಕ್ಷನ್ ನಡೆಯಲಿದೆ.
ಕೋರ್ಟ್ ಆದೇಶದಿಂದಾಗಿ ಮುನಿರತ್ನ ನಿಟ್ಟುಸಿರು ಬಿಟ್ಟಿದ್ದು, ಇವರಿಗೇ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ.