ಬೆಂಗಳೂರು: ಸಬ್ ಅರ್ಬನ್ ರೈಲ್ವೆ ಕನಸು ಈ ಬಾರಿ ನನಸಾಗಲಿದೆ, ಈ ಬಗ್ಗೆ ವಿಶ್ವಾಸ ಇರಲಿ. ಹಿಂದಿನ ಸರ್ಕಾರದ ಪ್ರತಿನಿಧಿಗಳು ಸಬ್ ಅರ್ಬನ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜೊತೆಗೆ ಸರ್ಕಾರ ಉತ್ತರ ಕೊಡುವ ಗೋಜಿಗೂ ಹೋಗಲಿಲ್ಲ. ಆದರೆ ಈ ಬಾರಿ ಯೋಜನೆ ನೂರಕ್ಕೆ ನೂರರಷ್ಟು ಈಡೇರಲಿದ್ದು, ಯಾವುದೇ ಸಂಶಯ ಬೇಡ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸ್ಪಷ್ಟಪಡಿಸಿದರು.
ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ವಿಭಾಗೀಯ ಕಚೇರಿಯಲ್ಲಿಂದು ಚೂನರ್-ಚೋಪನ್ ಎಲೆಕ್ಟ್ರಿಫೈಡ್ ಸೆಕ್ಷನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ, ಸಬ್ ಅರ್ಬನ್ ರೈಲು ಯೋಜನೆ ಕೈಗೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ್ ಖರ್ಗೆಯವರು ಹಿರಿಯರು, ಅವರು ರೈಲ್ವೇ ಸಚಿವರಾಗಿದ್ದವರು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಕೆಲಸ ಮಾಡಿದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ರು.
ಉತ್ತರ ಪ್ರದೇಶದಲ್ಲಿರುವ ಮಾರ್ಗಕ್ಕೆ ಬೆಂಗಳೂರಿನಿಂದ ಚಾಲನೆ ನೀಡಲಾಗಿದೆ. ದಕ್ಷಿಣ ಮತ್ತು ಉತ್ತರ ಜೋಡಣೆ ಮಾಡುವ ಕೆಲಸವನ್ನು ಪ್ರಧಾನಿಯವರು ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ದೇಶದ ಎಲ್ಲಾ ರೈಲ್ವೆಗಳನ್ನು ಎಲೆಕ್ಟ್ರಿಫೈಡ್ ಮಾಡುವ ಆಲೋಚನೆ ಇದೆ. ತ್ವರಿತಗತಿಯಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಬರುವ ದಿನಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಜೋಡಣೆ ಮಾಡುವ ಅಭಿಲಾಷೆ ಹೊಂದಿದ್ದೇವೆ ಎಂದು ತಿಳಿಸಿದರು.
ಕೋಲಾರದಿಂದ ರೈಲ್ವೇ ಕೋಚ್ ಫ್ಯಾಕ್ಟರಿ ಶಿಫ್ಟ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿ, ಫ್ಯಾಕ್ಟರಿ ಶಿಫ್ಟ್ ಮಾಡಿಲ್ಲ. ರೈಲ್ವೇ ಕೋಚ್ ಇರುತ್ತದೆ, ಆದರೆ ಈ ಬಜೆಟ್ ನಲ್ಲಿ ರೈಲ್ವೇ ವರ್ಕ್‌ಶಾಪ್‌ಗೆ ಒಪ್ಪಿಗೆ ಕೊಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ರೈಲ್ವೇ ಕೋಚ್ ಆರಂಭವಾಗುತ್ತದೆ. ಹಾಗಾಗಿ ವರ್ಕ್‌ಶಾಪ್ ಅನ್ನು ಮೊದಲು ಆರಂಭಿಸುತ್ತೇವೆ ಎಂದರು.