ಬೆಂಗಳೂರು: ಮಹಾನಗರ ಬೆಂಗಳೂರಲ್ಲಿ ಜೀವನ ಸಾಗಿಸುವುದಕ್ಕಾಗಿ ಬೀದಿ ವ್ಯಾಪಾರಿಗಳ ಸಂಖ್ಯೆ ಬಹಳ ದೊಡ್ಡದಿದೆ. ಇವರೆಲ್ಲರ ಸಮಸ್ಯೆಗಳನ್ನು ಬಗೆಹರಿಸಿ, ಸುಲಲಿತ ಜೀವನ ನಡೆಸೋದಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿ ಸರ್ಕಾರಗಳದ್ದಾಗಿರುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೊಳಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ 2016 ಹಾಗೂ 2017ರಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆಯ ನಡೆಸಲು ಸೂಚಿಸಲಾಯಿತು.
2017ರಲ್ಲಿ ಆರಂಭವಾದ ಸಮೀಕ್ಷೆ ಇನ್ನೂ ಕೂಡಾ ಪೂರ್ಣಗೊಂಡಿಲ್ಲ. ಕೇವಲ 26 ಸಾವಿರ ವ್ಯಾಪಾರಿಗಳ ಸರ್ವೇ ಮಾತ್ರ ನಡೆಸಿ ಕೇವಲ 15 ಸಾವಿರ ಜನರಿಗೆ ಐಡಿ ಕಾರ್ಡ್ ಕೊಟ್ಟು ಕೈತೊಳೆದುಕೊಂಡಿದೆ. ಇದರಿಂದ ಐಡಿ ಕಾರ್ಡ್ ಇಲ್ಲದವರಿಗೆ ಕಿರಿಕಿರಿಯಾಗಿದ್ದು, ಕೆಲವರಿಗೆ ಲಾಕ್ಡೌನ್ ಬಳಿಕ 10 ಸಾವಿರ ರೂಪಾಯಿಯನ್ನು ಸಾಲದ ರೂಪದಲ್ಲಿ ಕೊಟ್ಟಿದೆ. ಇನ್ನೂ ಕೆಲವು ಮಂದಿ ಕೊರೊನಾ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಕೊರೊನಾದಿಂದಾಗಿ ಶಿವಾಜಿನಗರದಲ್ಲಿ ಈಗಲೂ ಮುನ್ನೂರು ಜನರಿಗೆ ವ್ಯಾಪಾರ ಮಾಡಲು ಬಿಟ್ಟಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ, ಬಿಬಿಎಂಪಿ ಗಮನಕ್ಕೆ ತರಲಾಗಿದೆ. ಮೂರು ತಿಂಗಳಿಗೆ ತಲಾ 15 ಸಾವಿರ ವೇತನ ಪರಿಹಾರ ಕೊಡುವಂತೆ ಮನವಿ ಕೇಳಲಾಗಿದೆ. ಆದ್ರೆ ಕೇಂದ್ರ ಸರ್ಕಾರ ಸಾಲ ಕೊಡುತ್ತೆ ಎಂದು ಹೇಳಿ ಜನರನ್ನು ಸಾಲದ ಕೂಪಕ್ಕೆ ತಳ್ಳಲು ಮುಂದಾಗಿದೆ ಅನ್ನೋದು ಕೆಲವರ ಅಳಲು.
ವಿಜಯನಗರದ ಬೀದಿ ವ್ಯಾಪಾರಿ ಹಾಗೂ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿರುವ ಬಾಬು ಅವರು ಮಾತನಾಡಿ, ಲಾಕ್ಡೌನ್ ನಂತರವೂ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಇದರಿಂದಾಗಿ ಮನೆ ಬಾಡಿಗೆ ಕಟ್ಟಲು ಕಷ್ಟವಾಗಿದ್ದು, ಮಕ್ಕಳ ಶಾಲೆಯ ಶುಲ್ಕ ಭರಿಸಲೂ ಸಾಧ್ಯವಾಗ್ತಿಲ್ಲ. ಕೆಲವರ ಸಮೀಕ್ಷೆ ನಡೆದಿದ್ದರೂ, ಕೇವಲ ಐಡಿ ಕಾರ್ಡ್ ಕೊಟ್ಟಿರುವುದರಿಂದ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.