ಬೆಂಗಳೂರು : ಸ್ಯಾಂಕಿ ಕೆರೆ ಬಳಿಯಿರುವ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಬೆನ್ನಲೇ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿರುವ ಎಲ್ಲಾ ಪ್ರತಿಮೆಗಳ ಬಳಿ ಸೂಕ್ತ ನಿಗಾವಹಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ಡಿಸಿಪಿಗಳಿಗೂ ತಾಕೀತು ಮಾಡಿದ್ದಾರೆ.
ಕಳೆದ ಗುರುವಾರ ರಾತ್ರಿ ಕಿಡಿಗೇಡಿಗಳು ಸ್ಯಾಂಕಿ ಕೆರೆ ಬಳಿಯಿರುವ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಅಪಮಾನ ಮಾಡಿದ್ದರು. ಬಳಿಕ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು.
ಎಂಇಎಸ್ ಸಂಘಟನೆಯ ಕಾರ್ಯಕರ್ತರು ಪೊಲೀಸ್ ವಾಹನಗಳು ಮತ್ತು ಸಾರ್ವಜನಿಕರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದರು. ಜೊತೆಗೆ ಮಹಾರಾಷ್ಟ್ರದಲ್ಲಿ ಸಂಚರಿಸುವ ಕರ್ನಾಟಕ ನೋಂದಣಿ ವಾಹನಗಳ ಮೇಲೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.
ಬೆಂಗಳೂರಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಮತ್ತು ಮರಾಠಿಗರು ಹೆಚ್ಚಾಗಿ ವಾಸಿಸುವ ಪ್ರದೇಶಗಳಿಗೆ ಭದ್ರತೆ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರದಿಂದ ನಗರಕ್ಕೆ ಆಗಮಿಸುವ ಬಸ್ ಸೇರಿದಂತೆ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವ ಸಾಧ್ಯತೆಯಿದೆ.
ನಗರದ ಆಯಾ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದಿಂದ ಬರುವ ಬಸ್, ಇನ್ನಿತರ ವಾಹನಗಳಿಗೆ ಭದ್ರತೆ ನೀಡಬೇಕು ಹಾಗೂ ಮರಾಠಿಗರು ವಾಸಿರುವ ಕಾಲೋನಿಗಳ ಬಳಿ ಬಿಗಿ ಬಂದೋಬಸ್ತ್ ಮಾಡಲು ಹಾಗೂ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲು ಆಯುಕ್ತರು ಸೂಚನೆ ನೀಡಿದ್ದಾರೆ.
(ಇದನ್ನೂ ಓದಿ: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ ಆರೋಪ : ಓರ್ವ ವ್ಯಕ್ತಿಯ ಹತ್ಯೆ ಶಂಕೆ)