ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ನಲ್ಲಿ ರೈತರ ಹಿತದೃಷ್ಟಿಯಿಂದ ಆದಾಯ ಹೆಚ್ಚಳಕ್ಕೆ, ಕೃಷಿ ಅಭಿವೃದ್ಧಿಗೆ ಸಹಕರಿಸಲು ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮಹಿಳೆಯರಿಗೆ ಉದ್ಯೋಗ, ಎಲ್ಲೆಡೆ ಆರೋಗ್ಯ, ಎಲ್ಲರಿಗೂ ಆರೋಗ್ಯ, ಮೂಲಭೂತ ಸೌಕರ್ಯಗಳತ್ತ ಹೆಚ್ಚು ಗಮನಹರಿಸಿದ್ದಾರೆ ಎಂದು ರಾಜ್ಯ ಜಿಎಸ್ ಟಿ ಸಮಿತಿಯ ಅಧ್ಯಕ್ಷ ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಲದ ಬಜೆಟ್ ನಲ್ಲಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ ಇದಕ್ಕೆ ಸಂಪನ್ಮೂಲ ಕ್ರೋಢೀಕರಣ ಬಹಳ ಮುಖ್ಯವಾಗಿದ್ದು, ರಾಜ್ಯ ಸರ್ಕಾರದ ಮಿತಿಯಲ್ಲಿರುವ ಅಬಕಾರಿ ಸುಂಕ, ಸಾರಿಗೆ ಶುಲ್ಕ, ನೋಂದಣಿ ಶುಲ್ಕ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಜಿಎಸ್ ಟಿ ವಿಚಾರದಲ್ಲಿ ಯಾವ ರಾಜ್ಯಕ್ಕೂ ತೆರಿಗೆ ಹೆಚ್ಚು ಮಾಡಲು, ಕಡಿಮೆ ಮಾಡಲು ಅವಕಾಶ ಇರೋದಿಲ್ಲ. ಪ್ರತಿಯೊಂದು ಜಿಎಸ್ ಟಿ ಕೌನ್ಸಿಲ್ ಮೂಲಕವೇ ನಡೆಯಬೇಕು. ಹೀಗಾಗಿ ತೆರಿಗೆ ದರಗಳ ವಿಚಾರ ಯಾವ ಬಜೆಟ್ ನಲ್ಲೂ ಬರಲು ಅವಕಾಶವಿಲ್ಲ. ರಾಜ್ಯಗಳ ಬಜೆಟ್ ಮಿತಿಯಲ್ಲಿ ಬರುವ ಪ್ರೊಫೆಷನಲ್ ಟ್ಯಾಕ್ಸ್ ( ವೃತ್ತಿ ತೆರಿಗೆ) ನತ್ತ ಹೆಚ್ಚು ಗಮನ ಹರಿಸಬೇಕು ಅಂತ ಸಲಹೆ ನೀಡಿದರು.
ಈ ವೃತ್ತಿ ತೆರಿಗೆ ಸಂಬಂಧ ಎಫ್ ಕೆಸಿಸಿಐ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜಿಎಸ್ಟಿ ವಸೂಲಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಅಬಕಾರಿ ಸುಂಕ, ಸಾರಿಗೆ ಶುಲ್ಕ, ನೋಂದಣಿ ಶುಲ್ಕ ಸಂಬಂಧ ಯಾವುದೇ ಪ್ರಸ್ತಾಪ ಮಾಡಿಲ್ಲ. ತೆರಿಗೆ ಆಡಳಿತ ಸುಧಾರಣೆಯಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ ಮಾಡಬೇಕೆಂಬ ರೀತಿಯಲ್ಲಿ ಬಜೆಟ್ ಮಂಡಣೆ ಮಾಡಿದ್ದಾರೆ ಎಂದು ಮನೋಹರ್ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಓದಿ :ಮೀನು ವ್ಯಾಪಾರಿಗೆ ತಲವಾರು ತೋರಿಸಿ 2 ಲಕ್ಷ ರೂ. ದೋಚಿ ಪರಾರಿಯಾದ ಮೂವರು