ಬೆಂಗಳೂರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದಿನ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
2021ರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿಯೇ ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದ ಸರ್ಕಾರ ವಿಧಾನ ಪರಿಷತ್ನಲ್ಲಿ ಮಂಡಿಸುವ ಪ್ರಯತ್ನ ನಡೆಸಿತ್ತು. ಕಲಾಪದ ಕಡೆಯ ದಿನ ಅಜೆಂಡಾದಲ್ಲೂ ಸೇರಿಸಲಾಗಿತ್ತು. ಪ್ರತಿಪಕ್ಷ ಸದಸ್ಯರ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿ ಬಿಲ್ ಮಂಡಿಸಲು ಚಿಂತನೆ ನಡೆಸಿತ್ತು. ಆದರೆ ಬಿಜೆಪಿ ಸದಸ್ಯರ ಸಂಖ್ಯೆಯೇ ಕಡಿಮೆಯಾದ ಹಿನ್ನೆಲೆಯಲ್ಲಿ ಹೊರಹೋಗಿದ್ದ ಸದಸ್ಯರನ್ನು ಕರೆಯುವ ಸಲುವಾಗಿ ಮಧ್ಯಾಹ್ನದ ಕಲಾಪ ಆರಂಭವನ್ನು ವಿಳಂಬ ಮಾಡಲಾಯಿತು. ಅಂತಿಮವಾಗಿ ಕಲಾಪ ಆರಂಭಗೊಂಡಾಗ ಬಹುಮತಕ್ಕೆ ಬೇಕಾದ ಸಂಖ್ಯೆಯಿಲ್ಲದ ಕಾರಣಕ್ಕೆ ಬಿಲ್ ಮಂಡನೆಯಿಂದ ಬಿಜೆಪಿ ಹಿಂದೆ ಸರಿಯಿತು.
ಬಜೆಟ್ ಅಧಿವೇಶನದಲ್ಲಿ ಮತ್ತೆ ಈ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿತ್ತಾದರೂ ಅಗತ್ಯ ಬಹುಮತಕ್ಕೆ ಒಂದು ಸಂಖ್ಯೆ ಕಡಿಮೆ ಇರುವ ಕಾರಣದಿಂದ ಬಿಲ್ಗೆ ಸೋಲಾಗುವ ಆತಂಕ ಎದುರಾಗಿ ಬಿಲ್ ಮಂಡನೆ ನಿರ್ಧಾರ ಕೈಬಿಟ್ಟಿತ್ತು. ಇದೀಗ ಮಳೆಗಾಲದ ಅಧಿವೇಶನದವರೆಗೂ ಕಾಯಬೇಕಾಗಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಹೊರಟಿದೆ.
ಮಧ್ಯಾಹ್ನದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಂಪುಟ ನಿರ್ಣಯ ಕೈಗೊಂಡ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಲಿದೆ.
ಮತಾಂತರ ಬಿಲ್ನಲ್ಲೇನಿದೆ?
- ಆಮಿಷ, ಪ್ರಲೋಭನೆ, ಉದ್ಯೋಗ, ಉಚಿತ ಶಿಕ್ಷಣ, ನಗದು, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಅಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದಕ್ಕೆ ನಿಷೇಧ.
- ಬಲವಂತವಾಗಿ ಮತಾಂತರ ಮಾಡಿದರೆ ಆ ವ್ಯಕ್ತಿಗೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ, 25 ಸಾವಿರ ರೂ.ಗಳವರೆಗೆ ದಂಡ.
- ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ, ಮಹಿಳೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ಗಳವರೆಗೆ ದಂಡ.
- ಸಾಮೂಹಿಕವಾಗಿ ಮತಾಂತರ ಮಾಡಿದರೆ ಅಂಥಹವರಿಗೆ ಮೂರು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ಒಂದು ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
- ವಿವಾಹದ ಕಾರಣಕ್ಕಾಗಿಯೇ ಮತಾಂತರ ಮಾಡುವುದು ಅಪರಾಧ, ಈ ಮದುವೆಯನ್ನು ಅಸಿಂಧು ಎಂದು ಘೋಷಿಸಬಹುದು.
- ವಿವಾಹ ನೋಂದಣಿ ಮಾಡಿಸಿಕೊಳ್ಳುವ ರೀತಿಯಲ್ಲಿ 30 ದಿನದ ಮೊದಲೇ ಮತಾಂತರದ ಮಾಹಿತಿಯನ್ನು ಸಂಬಂಧಿಸಿದ ಕಚೇರಿಗೆ ಸಲ್ಲಿಸಬೇಕು ಮತ್ತು ನೋಟಿಸ್ ಬೋರ್ಡ್ ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಇರುವ ಕಾಲಾವಕಾಶ ಮುಗಿದ ನಂತರವೇ ಅಧಿಕಾರಿಯ ಒಪ್ಪಿಗೆ ಪಡೆದು ಮತಾಂತರ ಆಗಬೇಕು.
ಇದನ್ನೂ ಓದಿ: ಅರ್ಹತೆಗೆ ತಕ್ಕ ಉದ್ಯೋಗ ಸಿಗದೇ ಯುವತಿ ಆತ್ಮಹತ್ಯೆ.. ಉಡುಪಿಯಲ್ಲಿಂದು ಕಾಂಗ್ರೆಸ್ ಪ್ರತಿಭಟನೆ