ಬೆಂಗಳೂರು: ಪಕ್ಷದ ಪ್ರಮುಖರ ವಿಶೇಷ ಸಭೆಯನ್ನು ಪ್ರತ್ಯೇಕವಾಗಿ ನಡೆಸುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲೇ ಅನೌಪಚಾರಿಕವಾಗಿ ಲಂಚ್ ಮೀಟ್ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧರಿಸಿದ್ದಾರೆ. ಅದರಂತೆ ಲಂಚ್ ಮೀಟ್ಗೆ ರೇಸ್ ವ್ಯೂ ಕಾಟೇಜ್ ಸಿದ್ಧಗೊಂಡಿದೆ.
ಬಿಜೆಪಿ ಪ್ರಮುಖರ ವಿಶೇಷ ಸಭೆಯನ್ನು ರದ್ದುಗೊಳಿಸಿರುವ ಅಮಿತ್ ಶಾ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲೇ ಸಭೆ ನಡೆಸಲಿದ್ದಾರೆ. ಸಿಎಂ ಬೊಮ್ಮಾಯಿ ಇಂದು ಮಧ್ಯಾಹ್ನ ಭೋಜನ ಕೂಟ ಏರ್ಪಡಿಸಿದ್ದು, ಸಚಿವರು ಮತ್ತು ಪ್ರಮುಖರಿಗೂ ಆಹ್ವಾನ ನೀಡಲಾಗಿದೆ. ಹಾಗಾಗಿ ಮಧ್ಯಾಹ್ನ ತಾಜ್ ವೆಸ್ಟೆಂಡ್ ಹೋಟೆಲ್ ಬದಲಾಗಿ ಸಿಎಂ ನಿವಾಸದಲ್ಲೇ ಅನೌಪಚಾರಿಕವಾಗಿ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಜಗನ್ನಾಥ ಭವನದಲ್ಲಿ ಸಭೆ: ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಎನ್.ರವಿಕುಮಾರ್, ಮಹೇಶ್ ತೆಂಗಿನಕಾಯಿ, ಸಿದ್ದರಾಜು ಹಾಗೂ ಅಶ್ವತ್ಥ ನಾರಾಯಣ್ ಭಾಗಿಯಾಗಿದ್ದರು. ಅಮಿತ್ ಶಾ ಜೊತೆಗಿನ ಸಭೆಗೂ ಮುನ್ನ ಸಭೆ ಕರೆದು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೆಲ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಸಿಎಂ ಬೊಮ್ಮಾಯಿ ಸೇರಿದಂತೆ ಇತರ ಪ್ರಮುಖರ ನೇತೃತ್ವದ ಮೂರು ತಂಡದ ರಾಜ್ಯ ಪ್ರವಾಸ, ಹೊಸಪೇಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆ, ವಿಸ್ತಾರಕ್ ಯೋಜನೆ ಅನುಷ್ಠಾನ ಸೇರಿದಂತೆ ಇತರ ಸಂಘಟನಾತ್ಮಕ ಕಾರ್ಯಗಳ ಚಟುವಟಿಕೆಗಳ ಮಾಹಿತಿ ನೀಡಲು ರಾಜ್ಯ ಬಿಜೆಪಿ ವರದಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಅಮಿತ್ ಶಾ ಮುಂದೆ ರಾಜ್ಯಾಧ್ಯಕ್ಷ ಹಾಗೂ ಕಾರ್ಯದರ್ಶಿಗಳು ವರದಿ ಒಪ್ಪಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತಾಜ್ ವೆಸ್ಟ್ ಎಂಡ್ನಲ್ಲಿ ನಿಗದಿಯಾಗಿದ್ದ ಹೈವೋಲ್ಟೇಜ್ ಸಭೆ ರದ್ದುಪಡಿಸಿದ ಅಮಿತ್ ಶಾ