ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಅಧಿಕಾರದ ಅಹಂ ಇಲ್ಲದ ಸಾಧಕ ವ್ಯಕ್ತಿಯಾಗಿದ್ದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಗುಣಗಾನ ಮಾಡಿದರು.
ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ಬಿಜೆಪಿ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ರವಿಕುಮಾರ್, ಸುರೇಶ್ ಅಂಗಡಿ ವಿಶಾಲ ಹೃದಯಿ, ಜನಾನುರಾಗಿ, ಸ್ನೇಹಪರ ವ್ಯಕ್ತಿ. ಇದೇ ಕಾರಣಕ್ಕೆ ಅವರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಲು ಸಾಧ್ಯವಾಯಿತು. ನಮಗೆ ಅವರ ಆದರ್ಶಗಳು ಮಾರ್ಗದರ್ಶನವಾಗಲಿ ಎಂದು ಆಶಿಸಿದರು. ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ನಿಧನಕ್ಕೂ ಇದೇ ವೇಳೆ ಅವರು ಸಂತಾಪ ಸೂಚಿಸಿದರು. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾತನಾಡಿ, ಬದುಕಿನ ಮೌಲ್ಯ, ಸುರೇಶ್ ಅಂಗಡಿ ಅವರ ಸಾಮಾಜಿಕ ಬದ್ಧತೆ, ಸಮನ್ವಯತೆಯ ಕಾರ್ಯ ನಿರ್ವಹಣೆಯು ನಮಗೆಲ್ಲರಿಗೂ ಮಾದರಿ. ಶತ್ರುಗಳೇ ಇರದ ಸರಳ ವ್ಯಕ್ತಿತ್ವದ ಸುರೇಶ್ ಅಂಗಡಿ ಅವರ ಹೆಜ್ಜೆ ಗುರುತು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವಂತಿತ್ತು. ಕೊರೊನಾ ನಡುವೆ ಅವರ ಬಲಿದಾನ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.
ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಸುರೇಶ ಅಂಗಡಿ ಸರಳ ಸಜ್ಜನಿಕೆಯ, ಪರೋಪಕಾರದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡ ಮೇರು ವ್ಯಕ್ತಿ ಎಂದು ಎಂದರು.
ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಮಾತನಾಡಿ, ಅಂಗಡಿ ಅವರು ತಮಗೆ ಲಭಿಸಿದ ಜವಾಬ್ದಾರಿಗೆ ಗರಿಷ್ಠ ರೀತಿಯಲ್ಲೇ ಸ್ಪಂದಿಸಿದವರು. ರೈಲ್ವೆ ಖಾತೆ ಸಚಿವರಾಗಿ ಅತ್ಯುತ್ತಮ ಸಾಧನೆ ತೋರಿದ್ದರು ಎಂದು ನೆನಪಿಸಿಕೊಂಡರು.