ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿಯ ಮಹತ್ವದ ಸಭೆ ಆರಂಭಗೊಂಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಅಶೋಕ್, ಈಶ್ವರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪಾಲ್ಗೊಂಡಿದ್ದು, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಕೂಡಾ ಭಾಗಿಯಾಗಿದ್ದಾರೆ.
ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಸಿಗಲಿದ್ದು, ನಾಲ್ವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಸರ್ಕಾರ ರಚನೆಗೆ ಕಾರಣರಾದವರಿಗೆ ಅವಕಾಶ ನೀಡುವ ಜೊತೆಗೆ ಮೂಲ ನಿವಾಸಿಗಳಿಗೂ ಆದ್ಯತೆ ನೀಡಬೇಕಿದ್ದು, ಹಲವು ಆಯಾಮದಲ್ಲಿ ಚರ್ಚೆ ನಡೆಸಲಾಗುತ್ತಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಆದ ಲೋಪ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ಹೆಸರು ಶಿಫಾರಸು ಮಾಡಲು ಸಮಾಲೋಚನೆ ನಡೆಸಲಾಗುತ್ತಿದೆ.
ಕೋರ್ ಕಮಿಟಿ ಸಭೆಗೂ ಮುನ್ನ ಸಿಎಂ ಅನೌಪಚಾರಿಕ ಸಭೆ
ಬಿಜೆಪಿ ಕೋರ್ ಕಮಿಟಿ ಸಭೆಗೂ ಮುನ್ನ ಸಚಿವರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನೌಪಚಾರಿಕ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನಡೆಸಿದ ಸಭೆಯಲ್ಲಿ ಡಿಸಿಎಂಗಳಾದ ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ, ಸಚಿವಾದ ಆರ್.ಅಶೋಕ್, ಸುಧಾಕರ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹಾಗೂ ಮುನಿರತ್ನ ಸಹ ಭಾಗಿಯಾಗಿದ್ದರು.
ಸಭೆಯಲ್ಲಿ ಸಚಿವರ ಅಭಿಪ್ರಾಯ ಸಂಗ್ರಹ ಮಾಡಿದ ಸಿಎಂ, ಸರ್ಕಾರ ರಚನೆಗೆ ಕಾರಣರಾದವರ ಪರ ಮೃದು ಧೋರಣೆ ತಳೆಯಬೇಕು. ತ್ಯಾಗ ಮಾಡಿದವರಿಗೆ ಅವಕಾಶ ನೀಡಲು ನಮ್ಮವರೂ ಸಹಕಾರ ನೀಡಬೇಕಿದೆ ಎನ್ನುವ ವಿಷಯವನ್ನು ಮುಂದಿಟ್ಟು ಕೆಲಕಾಲ ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಇದೇ ವೇಳೆ ಸಿಎಂ ಭೇಟಿಗೆ ಆಗಮಿಸಿದ ಅನರ್ಹ ಶಾಸಕ ರೋಷನ್ ಬೇಗ್, ವಿಧಾನ ಪರಿಷತ್ ಆಯ್ಕೆ ಸಂಬಂಧ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತಮ್ಮ ಹೆಸರನ್ನೂ ಪರಿಗಣಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.