ಬೆಂಗಳೂರು: ಕೋವಿಡ್ -19ನಿಂದ ಪ್ರವಾಸೋದ್ಯಮ ನಲುಗಿ ಹೋಗಿದೆ. ಇದನ್ನೇ ನಂಬಿದ್ದ ಹೋಟೆಲ್ ಉದ್ಯಮ ಆರ್ಥಿಕ ಹಿಂಜರಿತ ಕಂಡಿದೆ. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲಾಗುತ್ತಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದೆ. ಹಾಗಾಗಿ 62 ಸ್ಟಾರ್ ಹೋಟೆಲ್‌ಗಳನ್ನು ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿ ಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ, ಶುಲ್ಕ ಎಲ್ಲವೂ ಕಡಿಮೆ ಮಾಡಲಾಗುತ್ತದೆ. ಹೋಟೆಲ್ ಉದ್ಯಮಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಕೋವಿಡ್-19 ಸಂಕಷ್ಟಕ್ಕೆ ಸಿಲುಕಿ ಜರ್ಜರಿತಗೊಂಡಿರುವ ಪ್ರವಾಸೋದ್ಯಮ ಕ್ಷೇತ್ರದ ಚೇತರಿಕೆಗೆ ಪೂರಕವಾಗುವಂತೆ ಸ್ಟಾರ್ ವರ್ಗೀಕೃತ ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನವನ್ನು ನೀಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಉದ್ಯಮಕ್ಕೆ ಅನ್ವಯವಾಗುತ್ತಿರುವ ರೀತಿಯಲ್ಲಿ ಹೋಟೆಲ್ ಕ್ಷೇತ್ರಕ್ಕೂ ಆಸ್ತಿ ತೆರಿಗೆ ಮತ್ತು ವಿದ್ಯುತ್ ದರಗಳನ್ನು ರಿಯಾಯಿತಿ ದರದಲ್ಲಿ ನಿಗದಿಪಡಿಸಲು ಸಂಪುಟ ಸಭೆ ಅನುಮೋದಿಸಿದೆ. ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡಿರುವ ಸ್ಟಾರ್ ವರ್ಗೀಕೃತ ಹೋಟೆಲ್‌ಗಳಿಗೆ ಈ ರಿಯಾಯಿತಿಗಳು ಅನ್ವಯವಾಗುತ್ತವೆ ಎಂದರು.
ಉದ್ಯಮ ಸ್ಥಾನಮಾನ ನೀಡಿಕೆಯಿಂದಾಗಿ ಸ್ಟಾರ್ ವರ್ಗೀಕೃತ ಹೋಟೆಲ್‌ಗಳು ಉದ್ಯಮ ಹಾಗೂ ವಾಣಿಜ್ಯ ವಿದ್ಯತ್ ದರಗಳ ವ್ಯತ್ಯಾಸದ ಮೊತ್ತದ ರಿಯಾಯಿತಿಯನ್ನು ಐದು ವರ್ಷಗಳ ಅವಧಿಗೆ ಪಡೆಯಲಿವೆ. ಹಾಗೆಯೇ ಆಸ್ತಿ ತೆರಿಗೆಯಲ್ಲಿ ಐದು ವರ್ಷಗಳಿಗೆ ಹೋಟೆಲ್ ಕಟ್ಟಡಕ್ಕೆ ಅನ್ವಯವಾಗುವ ಆಸ್ತಿ ತೆರಿಗೆ ಹಾಗೂ ಉದ್ಯಮ ಕಟ್ಟಡಕ್ಕೆ ಅನ್ವಯವಾಗುವ ಆಸ್ತಿ ತೆರಿಗೆಯ ವ್ಯತ್ಯಾಸದ ಮೊತ್ತದ ರಿಯಾಯಿತಿಯನ್ನು ಪಡೆಯಲಿವೆ ಎಂದು ವಿವರಿಸಿದರು.
ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವುದು ಹಾಗೂ ಪ್ರವಾಸೋದ್ಯಮ ನೀತಿ 2020-25ರ ಅಡಿ ವಿವಿಧ ಪ್ರೋತ್ಸಾಹಕ, ರಿಯಾಯಿತಿ ಹಾಗೂ ಸಹಾಯಧನ ನೀಡುವ ಮೂಲಕ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಪುನರುಜ್ಜೀವನ ಹಾಗೂ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 62 ಸ್ಟಾರ್ ವರ್ಗೀಕೃತ ಹೋಟೆಲ್‌ಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಕೈಗಾರಿಕೆ, ಇಂಧನ, ನಗರಾಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಜೊತೆ ಸಭೆ ನಡೆಸಿ ನಂತರ ಈ ನಿಟ್ಟಿನಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಸ್ಟಾರ್ ವರ್ಗೀಕೃತ ಹೋಟೆಲ್‌ಗಳಿಗೆ ಹೋಗುವ ಗ್ರಾಹಕರಿಗೂ ಈ ರಿಯಾಯಿತಿ ದೊರಕುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಂದಿ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮಗಳನ್ನು ಕೆ.ಎಸ್.ಟಿ.ಡಿ.ಸಿ ಮತ್ತು ಜೆ.ಎಲ್.ಆರ್ ವತಿಯಿಂದ ಸುಸ್ಥಿರ ಪರಿಸರ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು. ನಂದಿ ಗಿರಿಧಾಮ, ಜೋಗ್ ಫಾಲ್ಸ್, ಕೊಡಚಾದ್ರಿ, ಕೆಮ್ಮಣ್ಣುಗುಂಡಿಯ ಅಭಿವೃದ್ಧಿಗೆ ನಿರ್ಧರಿಸಿದ್ದೇವೆ. ಅದೇ ರೀತಿ ಬಾದಾಮಿ, ಪಟ್ಟದಕಲ್ಲು ಅಭಿವೃದ್ಧಿಗೂ ರೂಪುರೇಷೆ ನಡೆದಿದೆ. ವಿಪಕ್ಷ ನಾಯಕ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಜೊತೆ ಚರ್ಚಿಸಿದ್ದೇನೆ. ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಪಾರಂಪರಿಕ ಸ್ಥಳಗಳಾದ ಬಾದಾಮಿ, ಹಂಪಿ, ವಿಜಯಪುರ ಮತ್ತು ಬೇಲೂರುಗಳಲ್ಲಿ ಪ್ರವಸೋದ್ಯಮವನ್ನು ಹೆಚ್ಚಿಸಲು ಕೆ.ಎಸ್.ಟಿ.ಡಿ.ಸಿ ವತಿಯಿಂದ 4 ತ್ರಿ - ಸ್ಟಾರ್ ಹೋಟಲ್‍ಗಳನ್ನು ನಿರ್ಮಿಸಲಾಗುವುದು. ಕೆ.ಎಸ್.ಟಿ.ಡಿ.ಸಿ ಮತ್ತು ಜೆ.ಎಲ್.ಆರ್ ವತಿಯಿಂದ ರಾಜ್ಯದ ಆಣೆಕಟ್ಟುಗಳಲ್ಲಿ ಜಲಕ್ರೀಡೆಗಳ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ರಾಜ್ಯದ ಸಂಸ್ಕೃತಿ ಮತ್ತು ಪಾರಂಪರಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಕೆ.ಎಸ್.ಟಿ.ಡಿ.ಸಿ ವತಿಯಿಂದ ರೋರಿಚ್ ಎಸ್ಟೇಟ್ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನಿಂದ ಪ್ರವಾಸಿಗರು ಹೊರಗೆ ಹೋಗಲು ರಾಮನಗರ, ಕೋಲಾರ, ತುಮಕೂರು ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪರಿಶೀಲನಾ ಸಭೆ:
ರಾಜ್ಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆಗೇರಿಸಿ ದೇಶ - ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮರ್ಪಕ ಕ್ರಿಯಾ ಯೋಜನೆಯನ್ನು ತ್ವರಿತವಾಗಿ ಸಿದ್ಧಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಯೋಗೇಶ್ವರ ತಾಕೀತು ಮಾಡಿದರು.
ಈ ನಿಟ್ಟಿನಲ್ಲಿ ರಾಜ್ಯದ ಮೂರ್ನಾಲ್ಕು ಐತಿಹಾಸಿಕ ಪ್ರವಾಸಿ ತಾಣಗಳಿಗೆ ದೇಶದ ಜನತೆ ಭೇಟಿ ನೀಡುವಂತೆ ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ರಮಣೀಯ ಪ್ರವಾಸಿ ತಾಣಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ ಯೋಜನೆ ರೂಪಿಸಲು ಖಾಸಗಿ ಕಂಪನಿ ಮುಂದೆ ಬಂದಿದ್ದು, ಈ ಬಗ್ಗೆ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.
ಈ ತಿಂಗಳ ಅಂತ್ಯಕ್ಕೆ ರಾಜ್ಯದ ಕರಾವಳಿ ಪ್ರದೇಶಕ್ಕೆ ಮೂರು ದಿನಗಳ ಕಾಲ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮೈಸೂರು ಜಿಲ್ಲೆಯ ಸುತ್ತಮುತ್ತ ಮೂರು ದಿನಗಳ ಕಾಲ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರವಾಸಿ ತಾಣಗಳು ಅಭಿವೃದ್ಧಿಗೊಳಿಸುವ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು. ಬಜೆಟ್ನಲ್ಲಿ ಪ್ರವಾಸೋದ್ಯಮ ಪರಿಸರ, ಮತ್ತು ಜೀವಿಶಾಸ್ತ್ರ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.