ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡೆಗೆ ಹೆಚ್ಚುವರಿ ಹಣ ಸಂದಾಯವಾಗಿದ್ದು 75 ಮಂದಿಗೆ ಅನುಕೂಲ ಕಲ್ಪಿಸಲಿದ್ದೇವೆ ಎಂದು ಸಚಿವ ನಾರಾಯಣ ಗೌಡ ಪರಿಷತ್ ಕಲಾಪದಲ್ಲಿ ಉತ್ತರಿಸಿದರು.
ನಿಯಮ 330 ರ ಅಡಿ ಕಾಂಗ್ರೆಸ್ ಸದಸ್ಯ ಹಾಗೂ ಪರಿಷತ್ ಪ್ರತಿಪಕ್ಷ ಉಪನಾಯಕ ಕೆ. ಗೋವಿಂದರಾಜು ನಡೆಸಿದ ಚರ್ಚೆಗೆ ಉತ್ತರಿಸಿ, ರಾಜ್ಯದ 15 ಕಡೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ. ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಅಭಿವೃದ್ಧಿಗೊಳಿಸಲಾಗಿದೆ. ಕ್ರೀಡಾ ಕ್ಷೇತ್ರ ಪ್ರಗತಿಗೆ ಬದ್ಧವಾಗಿದ್ದೇನೆ ಎಂದರು.
ಕೋಚ್ಗಳ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕ್ರೀಡಾಪಟುಗಳ ಡಿಎ ಹೆಚ್ಚಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. 1 ಸಾವಿರ ಕೋಟಿರೂ. ಅನುದಾನ ಕೇಳಿದ್ದೇವೆ. ಆದರೆ ಶೇ.70 ರಷ್ಟು ಕ್ರೀಡಾ ಕ್ಷೇತ್ರದ ಬೇಡಿಕೆ ಈಡೇರಲಿದೆ. ಸಿಎಂ ಬಳಿ ಚರ್ಚಿಸುತ್ತಲೇ ಇದ್ದೇನೆ. ಎಲ್ಲಾ ಸದಸ್ಯರು ಪ್ರಸ್ತಾಪಿಸಿರುವ ವಿಚಾರ ಗಮನದಲ್ಲಿಟ್ಟಿದ್ದೇನೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಶೇ.2 ರಷ್ಟು ಕ್ರೀಡಾಪಟುಗಳ ನೇಮಕ ಮಾಡುವ ಆದೇಶ ಇದೆ. ಇದಲ್ಲದೇ ಬೇರೆ ಇಲಾಖೆಯಲ್ಲೂ ನೇಮಕ ಮಾಡಬೇಕು. ವಿಕಲಚೇತನ ಕ್ರೀಡಾಪಟುಗಳಿಗೆ ಸೌಲಭ್ಯ ಬೇಕು. ವಿದೇಶಗಳಲ್ಲಿ ಇವರಿಗೆ ಉತ್ತಮ ಸೌಕರ್ಯ ಸಿಗುತ್ತದೆ. ಇವರಿಗೆ ವಿಶೇಷ ತರಬೇತಿ ನೀಡಬೇಕು. ಮಿನಿ ಒಲಿಂಪಿಕ್ ಜ್ಯೂನಿಯರ್ ಪ್ರತಿ ವರ್ಷ ಮಾಡಬೇಕು. ಒಂದು ಕಡೆ ಕ್ರೀಡಾ ಮ್ಯೂಸಿಯಂ ಮಾಡಬೇಕು ಎಂದರು.
ಗೋವಿಂದರಾಜ್ ವಿಚಾರವನ್ನು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಪ್ರದೀಪ್ ಶೆಟ್ಟರ್, ಜೆಡಿಎಸ್ ಸಚೇತಕ ಗೋವಿಂದರಾಜು, ಶಶಿಲ್ ನಮೋಶಿ, ಎಸ್.ವಿ. ಸಂಕನೂರು, ಅರುಣ್ ಶಹಾಪೂರ್, ವೈ.ಎ. ನಾರಾಯಣಸ್ವಾಮಿ, ಸಾಯಬಣ್ಣ ತಳವಾರ್, ರಮೇಶ್ ಗೌಡ, ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್, ಅಲ್ಲಂ ವೀರಭದ್ರಪ್ಪ, ಶಾಂತಾರಾಮ್ ಸಿದ್ದಿ, ಮರಿತಿಬ್ಬೇಗೌಡ, ಯು.ಬಿ. ವೆಂಕಟೇಶ್ ಮತ್ತಿತರರು ಮಾತನಾಡಿದರು.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯ ಕಾನೂನು ಬಾಹಿರ: ಸಿಎಂ