ಬೆಂಗಳೂರು: ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ. ಎಲ್ಲ ಸರ್ಕಾರಿ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸಲು ಬಿಎಸ್ವೈ ಸರ್ಕಾರ ಮುಂದಾಗಿದೆ.
ಅಲ್ಲದೆ, ಇನ್ಮುಂದೆ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ತಿಂಗಳ ಮೊದಲ ವಾರದಲ್ಲಿಯೇ ವೇತನ ಮತ್ತು ಭತ್ಯೆಗಳನ್ನು ಪಾವತಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
![Soon Good news for government employee](https://etvbharatimages.akamaized.net/etvbharat/prod-images/4051312_jay.jpg)
ನೌಕರರಿಗೆ ಆರೋಗ್ಯ ಭಾಗ್ಯ: ಸರ್ಕಾರಿ ನೌಕರರು ಪಡೆದ ಚಿಕಿತ್ಸೆ ವೆಚ್ಚದ ಮರುಪಾವತಿ ವಿಳಂಬವಾಗುತ್ತಿದ್ದು, ಅನುದಾನದ ಕೊರತೆ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ವೆಚ್ಚದ ಮರುಪಾವತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಪೊಲೀಸ್ ಇಲಾಖೆ ಮಾತ್ರ ಈ ಯೋಜನೆಯ ಅನುಕೂಲ ಪಡೆದುಕೊಳ್ಳುತ್ತಿದೆ. ಹೀಗಾಗಿ ಮರುಪಾವತಿ ವೆಚ್ಚದ ನಿಯಮಗಳಲ್ಲಿ ಬದಲಾವಣೆ ತರಬೇಕು. ಅದನ್ನ ಸರ್ಕಾರಿ ನೌಕರರಿಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು. ಆರೋಗ್ಯ ಭಾಗ್ಯ ಯೋಜನೆ ವಿಸ್ತರಣೆಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶಿಸಿದ್ದಾರೆ.
ಮೊದಲ ವಾರದಲ್ಲಿಯೇ ವೇತನ ಮತ್ತು ಭತ್ಯೆ: ಆರೋಗ್ಯ, ಶಿಕ್ಷಣ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ವೇತನ ಮತ್ತು ಭತ್ಯೆಗಳನ್ನು ಸಕಾಲಕ್ಕೆ ಪಡೆಯಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ತಿಂಗಳ ಮೊದಲ ವಾರದಲ್ಲಿಯೇ ವೇತನ ಮತ್ತು ಭತ್ಯೆಗಳನ್ನು ಪಾವತಿಸಬೇಕು. ನಂತರ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಬಳಿಕ ಮರು ಹೊಂದಾಣಿಕೆಯ ಷರತ್ತಿಗೊಳಪಟ್ಟು ಪಾವತಿಸಲು ಆರ್ಥಿಕ ಇಲಾಖೆಯ ಎಸಿಎಸ್ಗೆ ನಿರ್ದೇಶನ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.