ಬೆಂಗಳೂರು: ರಾಜ್ಯದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದ ರಾಜ್ಯ ಕಾಂಗ್ರೆಸ್ ನಾಯಕರು, ಸುರ್ಜೇವಾಲಗೆ ನಕಲಿ ದಾಖಲೆಗಳನ್ನು ಕೊಟ್ಟು ಬಿಡುಗಡೆ ಮಾಡಿಸಿದ್ದಾರೆ. ಈ ಎಲ್ಲ ಪ್ರಯತ್ನಗಳ ಹಿಂದೆ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಇದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್ ಆರೋಪಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಶ್ವಾಸಾರ್ಹವಾದ ಯಾವುದೇ ಆರೋಪ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತು ಹೋಗಿದೆ. ಅದಕ್ಕೇ ಈ ರೀತಿ ಸುಳ್ಳು ದಾಖಲೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದ ರಾಜ್ಯ ಕಾಂಗ್ರೆಸ್ ನಾಯಕರು, ಸುರ್ಜೇವಾಲಗೆ ನಕಲಿ ದಾಖಲೆಗಳನ್ನು ಕೊಟ್ಟು ಬಿಡುಗಡೆ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಈ ಎಲ್ಲ ಪ್ರಯತ್ನಗಳ ಹಿಂದೆ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಇದ್ದಾರೆ. ವಾದ್ರಾನ ಹಗರಣಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಪ್ರತಿಬಾರಿ ರಾಬರ್ಟ್ ವಾದ್ರಾ ಹ್ಯಾಪ್ ಮೋರೆ ಹಾಕಿಕೊಂಡು ಇಡಿ ವಿಚಾರಣೆಗೆ ಹೋಗಿ ಬರುವುದನ್ನು ನೋಡಿ ಸಹಿಸಲಾಗದೆ ಕಾಂಗ್ರೆಸ್ಸಿಗರು ಸುಳ್ಳು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಧುಸೂದನ್ ಟೀಕಿಸಿದರು.
ಶೋಭಾ ಕರಂದ್ಲಾಜೆ-ಯಡಿಯೂರಪ್ಪ ವಿವಾಹ ಆಗಿದ್ದಾರೆ ಎಂಬ ಆರೋಪಕ್ಕೆ ಗೋ.ಮಧುಸೂಧನ್ ಕೆಂಡಾ ಮಂಡಲವಾದರು. ಯಡಿಯೂರಪ್ಪ ಶೋಭಾ ಅವರನ್ನು ಯಾವಾಗಲೂ ಸಹೋದರಿ ಎಂದೇ ಸಂಬೋಧಿಸುತ್ತಾರೆ. ಇದು ಕಾಂಗ್ರೆಸ್ಸಿಗರ ಅಶ್ಲೀಲ ನಡವಳಿಕೆಯ ಪರಮಾವಧಿ. ಜತೆಗೆ ಯಾರೂ ಕೂಡ ತಾವು ಇಂತಹವರನ್ನು ಮದುವೆಯಾಗಿರುವುದಾಗಿ ಡೈರಿಯಲ್ಲಿ ಬರೆದುಕೊಳ್ಳುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್ಸಿಗರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದೆ. ಆ ಪಕ್ಷದ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಡಿಯೂರಪ್ಪ ಕೂಡ ಹೇಳಿದ್ದಾರೆ ಎಂದರು.
ಯಡಿಯೂರಪ್ಪ ಮೇಲೆ ಇದುವರೆಗೆ ಯಾವುದೇ ಐಟಿ ದಾಳಿಯೂ ನಡೆದಿಲ್ಲ. ಒಂದು ವೇಳೆ ಐಟಿಯವರು ದಾಖಲೆಗಳನ್ನು ವಶಪಡಿಸಿಕೊಂಡು ನಂತರ ಅದರ ಮೇಲೆ ಸೀಲ್ ಹಾಕುತ್ತಾರೆ. ಸಂಬಂಧಪಟ್ಟವರ ಸಂಬಂಧಿಕರ ಸಹಿ ಪಡೆಯುತ್ತಾರೆ. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಈ ದಾಖಲೆಗಳು ಐಟಿ ದಾಳಿಯಲ್ಲಿ ವಶಪಡಿಸಿಕೊಂಡಿರುವುದು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರವೂ ಇಲ್ಲ. ಇದು ಕಾಂಗ್ರೆಸ್ನ ದುಷ್ಕೃತ್ಯ ಎಂದು ಹರಿಹಾಯ್ದರು.