ಬೆಂಗಳೂರು : ಕೋವಿಡ್ ಸೋಂಕಿತರು ಅತೀಯಾದ ಸ್ಟಿರಾಯ್ಡ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಬ್ಲಾಕ್ ಫಂಗಸ್‌ಗೆ ತುತ್ತಾಗುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದರ ಬಳಕೆಗೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡ್ರಗ್ಸ್ ಲಾಜಿಸ್ಟಿಕ್ಸ್ ಸೊಸೈಟಿಯಧಿಕಾರಿಗಳ ಜೊತೆಗೆ ಸಚಿವ ಆರ್ ಅಶೋಕ್ ಕೋವಿಡ್ ಔಷಧಿ ಲಭ್ಯತೆ ಕುರಿತಂತೆ ಪರಾಮರ್ಶೆ ಸಭೆ ನಡೆಸಿದರು.
ಈ ವೇಳೆ ಸ್ಟಿರಾಯ್ಡ್ ಬಳಕೆಯ ಕುರಿತಂತೆ ಸೂಕ್ತ ಮಾರ್ಗಸೂಚಿಯನ್ನ ಹೊರಡಿಸಬೇಕಿದೆ. ಇಂದು ಹೋಮ್ ಐಸೋಲೇಷನ್ ಕಿಟ್ ನಲ್ಲಿಯೂ ಕೂಡ ಸ್ಟಿರಾಯ್ಡ್ ಮಾತ್ರೆಗಳನ್ನ ಇಟ್ಟು ಕೊಡಲಾಗುತ್ತಿದೆ.
ಇದರ ಬಳಕೆಯನ್ನ ಆಸ್ಪತ್ರೆಗಳಲ್ಲಿ ಅದು ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸುವಂತೆ ಸೂಚಿಸಬೇಕು. ಹಾಗೆಯೇ ವಿಶ್ವಾರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನ ಅನುಸರಿಸುವುದರ ಜೊತೆಗೆ ಕೆಲ ನಿರ್ಬಂಧನೆಗಳನ್ನು ಹಾಕಬೇಕಿದೆ ಎಂದು ಹೇಳಿದರು.
ನಂತರದಲ್ಲಿ ರೆಮ್ಡೆಸಿವಿರ್ ಲಭ್ಯತೆ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸದ್ಯ ರೆಮ್ಡಿಸಿವಿರ್ ವಯಲ್‌ಗಳ ಕೊರತೆ ಕಾಡುತ್ತಿಲ್ಲ. ಈ ಮೊದಲು ದಿನಕ್ಕೆ 18 ರಿಂದ 20 ಸಾವಿರ ವಯಲ್‌ಗಳಿಗೆ ಬೇಡಿಕೆ ಇತ್ತು. ಈಗ ಅದು 5 ಸಾವಿರಕ್ಕೆ ಇಳಿದಿದೆ.
ಖುದ್ದು ನಾನು ಕೂಡ ಕೆಲ ಆಸ್ಪತ್ರೆಗಳಿಗೆ ಕರೆ ಮಾಡಿ ಅವರಿಗೆ ಅಗತ್ಯವಿರುವಷ್ಟು ವಯಲ್‌ಗಳು ದೊರಕುತ್ತಿರುವುದರ ಬಗ್ಗೆ ಖಚಿತ ಪಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಬ್ಲಾಕ್ ಫಂಗಸ್ ವಿಚಾರವಾಗಿ ನನಗೂ ಕೂಡ ಹಲವು ಕರೆಗಳು ಬರುತ್ತಿವೆ. ಈಗಾಗಲೇ ಚಿಕಿತ್ಸೆಯ ಕುರಿತಂತೆ ಸ್ಪಷ್ಟ ಮಾಹಿತಿಗಳನ್ನ ನೀಡಲಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿ ಕುರಿತಂತೆ ಈಗಾಗಲೇ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರ ಜೊತೆ ಮಾತನಾಡಿದ್ದೇನೆ.
ನಾಳೆ 10 ಸಾವಿರ ವಯಲ್‌ಗಳನ್ನ ಕೇಂದ್ರವು ಕಳುಹಿಸಿಕೊಡಲಿದ್ದು, ಇನ್ನೂ ಹೆಚ್ಚಿನ ಹಂಚಿಕೆ ರಾಜ್ಯಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದರು.