ಬೆಂಗಳೂರು: ಹಗಲು ವೇಳೆಯೇ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿ, 12 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೆಸರಘಟ್ಟದ ಮೂಲದ ಮಂಜುನಾಥ್(27), ಸುದೀಪ್ ಬಂಧಿತ ಆರೋಪಿಗಳು. ಆಶಾ ಕಾರ್ಯಕರ್ತೆಯಾದ ಬೈಲ ಹನುಮಕ್ಕ ಎಂಬ ಮಹಿಳೆ ಸೆಪ್ಟೆಂಬರ್ 9 ರಂದು ಕೆಲಸದ ಮೇಲೆ ಹೊರ ಹೋಗಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಮನೆಯ ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಸಾಮಾನುಗಳು ಕಳ್ಳತನವಾಗಿದ್ದವು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಇಬ್ಬರ ಬಂಧನದಿಂದ ಸುಮಾರು 12.50 ಲಕ್ಷ ರೂ. ಬೆಲೆ ಮೌಲ್ಯದ 240 ಗ್ರಾಂ ಚಿನ್ನಾಭರಣ, 103 ಗ್ರಾಂ ಬೆಳ್ಳಿ, 2 ದ್ವಿಚಕ್ರ ವಾಹನ ಹಾಗೂ 2 ಮೊಬೈಲ್‌ಗಳನ್ನು ಸೀಜ್ ಮಾಡಿದ್ದಾರೆ. ಆರೋಪಿ ಸುದೀಪ್ 2018ರಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಲಿಗೆ, ಮೊಬೈಲ್ ಕಳವು ಪ್ರಕರಣದಲ್ಲಿ ಜೈಲುಸೇರಿದ್ದ. ಜಾಮೀನಿನ ಮೇಲೆ ಹೊರ ಬಂದ ಆರೋಪಿ ಐಷರಾಮಿ ಜೀವನ ನಡೆಸಲು ಮತ್ತೆ ಕಳ್ಳತನಕ್ಕೆ ಇಳಿದಿದ್ದ ಎಂಬುದು ತನಿಖೆ ತಿಳಿದು ಬಂದಿದೆ.