ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದು, ಕೆಲವರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಸಮಾಜ ಸೇವಕರೋರ್ವರು ವಿಜ್ಞಾನ ನಗರದಲ್ಲಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.
ವಿಜ್ಞಾನ ನಗರದ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಕಡು ಬಡವರು ಹಾಗೂ ಹೊರ ರಾಜ್ಯದವರು ವಾಸಿಸುತ್ತಿದ್ದಾರೆ. ಜನರು ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಊಟದ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿ ಸಮಾಜ ಸೇವಕ ಲೋಕೇಶ್ ಗೌಡ, ವಾರಕ್ಕೆ ಒಂದು ದಿನ ತರಕಾರಿ, ದಿನಸಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಸೂಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ಸಾವಿರಾರು ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಾ ಕಡು ಬಡವರ ಕಷ್ಟಕ್ಕೆ ನೆರವಾಗಿದ್ದಾರೆ.
ದಿನಸಿಯನ್ನು ಪಡೆಯಲು ಸಾವಿರಾರು ಜನ ಸುಮಾರು ಎರಡು, ಮೂರು ಕಿಲೋ ಮೀಟರ್ ದೂರ ಸಾಲುಗಟ್ಟಿ ನಿಂತಿದ್ದರು. ಪ್ರತಿ ವಾರ 8 ಕೆಜಿ ಅಕ್ಕಿ, 5 ಕೆಜಿ ರಾಗಿ, 2 ಕೆಜಿ ಸಕ್ಕರೆ, 1 ಕೆಜಿ ಅಡುಗೆ ಎಣ್ಣೆ, ಈರುಳ್ಳಿ 2 ಕೆಜಿ, 1 ಕೆಜಿ ಉಪ್ಪು,1 ಕೆಜಿ ತೊಗರಿ ಬೇಳೆ ಇನ್ನೂ ಕೆಲವು ಸಾಂಬಾರ್ ಪದಾರ್ಥಗಳನ್ನು ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಿದರು.
ನಂತರ ಮಾತನಾಡಿದ ಲೋಕೇಶ್ ಗೌಡ, ಕೊರೊನಾ ವೈರಸ್ ಕಾರಣಕ್ಕೆ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ದಿನಗೂಲಿ ಕಾರ್ಮಿಕರು, ಬಡವರು ದೈನಂದಿನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ದಿನಸಿ, ತರಕಾರಿ ಇರುವ ಆಹಾರನ ಪದಾರ್ಥಗಳ ಕಿಟ್‌ಗಳನ್ನು 3,000 ಕುಟುಂಬಗಳಿಗೆ ವಿತರಿಸುತ್ತಿದ್ದೇವೆ ಎಂದರು.