ಬೆಂಗಳೂರು: ಜನಪರ ಹೋರಾಟ, ಸಮಾಜಸೇವೆ ಮೂಲಕ ಮನೆಮಾತಾಗಿರುವ ಹಾಸನದ ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಅವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಎಎಪಿಯ ರಾಜ್ಯ ಕಚೇರಿಯಲ್ಲಿ ಅಗಿಲೆ ಯೋಗೀಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ವಿವಿಧ ಪಕ್ಷಗಳ ಪ್ರಾಮಾಣಿಕ ನಾಯಕರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಆಮ್ ಆದ್ಮಿ ಪಾರ್ಟಿಯತ್ತ ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಿ, ರಾಜ್ಯದಲ್ಲಿ ಎಎಪಿಯು ಹೆಮ್ಮರವಾಗಿ ಬೆಳೆಯುವ ದೃಢ ವಿಶ್ವಾಸವಿದೆ. ಅಗಾಧ ಸಮಾಜ ಸೇವೆಯಿಂದ ಹಾಸನ ಜಿಲ್ಲೆಯಲ್ಲಿ ಹೆಸರು ಮಾಡಿರುವ ಅಗಿಲೆ ಯೋಗೀಶ್ ಅವರ ಸೇರ್ಪಡೆಯಿಂದಾಗಿ ಆ ಭಾಗದಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.
ಎಎಪಿ ಸೇರಿದ ಬಳಿಕ ಮಾತನಾಡಿದ ಅಗಿಲೆ ಯೋಗೀಶ್, ರಾಜ್ಯವನ್ನಾಳಿದ ಮೂರು ಪಕ್ಷಗಳು ಕೂಡ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದರಲ್ಲಿ ವಿಫಲವಾಗಿದೆ. ಹಾಸನ ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಲು ತೀವ್ರ ನಿರ್ಲಕ್ಷ್ಯ ತೋರಿವೆ. ಪ್ರಸ್ತುತ ರಾಜಕೀಯದಲ್ಲಿ ಆಮ್ ಆದ್ಮಿ ಪಾರ್ಟಿಯೊಂದೇ ಪಾರದರ್ಶಕ ಆಡಳಿತದಲ್ಲಿ ನಂಬಿಕೆ ಹೊಂದಿದೆ. ದೆಹಲಿ ಹಾಗೂ ಪಂಜಾಬ್ ಜನರಿಗೆ ಸಿಗುತ್ತಿರುವ ವಿವಿಧ ಸೌಲಭ್ಯಗಳು ನಮ್ಮ ಜನರಿಗೂ ಸಿಗುವಂತಾಗಬೇಕು. ಇದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಜನರು ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಬೇಕು ಎಂದರು.
ಪಂಚಾಯತ್ ಮಟ್ಟದಿಂದ ಹೋರಾಟ: ಆಮ್ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಮಾತನಾಡಿ, ಅಗಿಲೆ ಗ್ರಾಮದಲ್ಲಿ ಮಹಾಗಣಪತಿ ಯುವಕ ಸಂಘ ಸ್ಥಾಪಿಸಿದ ಯೋಗೀಶ್‌ರವರು ಪಂಚಾಯತ್ ಮಟ್ಟದಲ್ಲಿ ಆಗಬೇಕಿರುವ ಕೆಲಸಕ್ಕಾಗಿ ಹೋರಾಟ ಆರಂಭಿಸಿದರು. ಹಾಸನ ನಗರದಲ್ಲಿ ಅನೇಕ ಬಡಾವಣೆಗಳಿಗೆ ಕುಡಿವ ನೀರಿನ ಪೂರೈಕೆಯಾಗದೇ ಜನರು ಕಷ್ಟದಲ್ಲಿರುವುದನ್ನು ಗಮನಿಸಿ, ಸಹರ ಜನಸೇವಾ ಟ್ರಸ್ಟ್ ಮೂಲಕ ನಿತ್ಯ 50 ಸಾವಿರ ಲೀಟರ್ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆ. ನಗರದಲ್ಲಿ ಒಟ್ಟು 15 ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದ್ದಾರೆ. ಈ ಮೂಲಕ ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
1994 ರಿಂದ ಸಕ್ರಿಯ ರಾಜಕಾರಣ: 1994 ರಿಂದ ಸಕ್ರಿಯ ರಾಜಕೀಯದಲ್ಲಿರುವ ಅಗಿಲೆ ಯೋಗೀಶ್ ಅವರು ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಅಸಮರ್ಪಕ ಕಸ ವಿಲೇವಾರಿ ವಿರುದ್ಧ ಹೋರಾಟ, ಬರಗಾಲದಲ್ಲಿ ಮೇವು ವಿತರಣೆ, ಭೂಸ್ವಾಧೀನಕ್ಕೊಳಗಾದ ರೈತರಿಗೆ ಪರಿಹಾರಕ್ಕಾಗಿ ಹೋರಾಟ ಸೇರಿದಂತೆ ಇನ್ನೂ ಅನೇಕ ಜನಪರ ಹೋರಾಟಗಳನ್ನು ಮುನ್ನಡೆಸಿದ್ದಾರೆ.
ಸಾವಿರಾರು ಜನರಿಗೆ ವಿವಿಧ ಸೌಲಭ್ಯಗಳು ಸಿಗುವಂತೆ ಮಾಡಿದ್ದಾರೆ ಎಂದು ದಿಲೀಪ್ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಮ್ ಆದ್ಮಿ ಪಾರ್ಟಿಯ ಹಲವು ಮುಖಂಡರು ಹಾಗೂ ಅಗಿಲೆ ಯೋಗೀಶ್‌ರವರ ಅನೇಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.