ಬೆಂಗಳೂರು: ಐದನೇ ದಿನದ ಉಪವಾಸ ಸತ್ಯಾಗ್ರಹದಲ್ಲಿರುವ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡುರನ್ನು, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಭೇಟಿಯಾದರು.
ಈ ವೇಳೆ ತಮ್ಮ ಬೇಡಿಕೆಗಳನ್ನಿಟ್ಟ ಪ್ರಸನ್ನ ಹೆಗ್ಗೋಡು, ದೇಶದಲ್ಲಿ ಪವಿತ್ರ ಆರ್ಥಿಕತೆ ಜಾರಿಯಾಗಬೇಕು. ಖಾದಿ ವಸ್ತ್ರಗಳ ಮೇಲೆ ಶೂನ್ಯ ಜಿಎಸ್ಟಿ ಜಾರಿಯಾಗಬೇಕು. ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕತೆಯ ನೀತಿ ಬದಲಿಸಿ ಉತ್ತೇಜನ ನೀಡಬೇಕು. ಹೆಚ್ಚೆಚ್ಚು ಜನರಿಗೆ ಉದ್ಯೋಗ ಸಿಗಲು ಯಾಂತ್ರೀಕರಣವನ್ನು ಕಡಿಮೆ ಮಾಡಿ, ಶೇಕಡಾ 60 ರಷ್ಟು ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕು ಎಂದು ಬೇಡಿಕೆಗಳನ್ನು ಸಲ್ಲಿಸಿದರು. ಅಲ್ಲದೆ ಇದಕ್ಕಾಗಿ ಕೇಂದ್ರ ಸರ್ಕಾರ ಕಾನೂನಾತ್ಮಕ ಬದಲಾವಣೆ ತರಬೇಕು ಎಂದು ಆಗ್ರಹಿಸಿದರು.
ಆದರೆ ಇದಕ್ಕೆ ಒಪ್ಪದ ಡಿಸಿಎಂ, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ. ಈಗ ಉಪವಾಸ ಸತ್ಯಾಗ್ರಹ ಕೈಬಿಡಬೇಕೆಂದು ಮನವಿ ಮಾಡಿದರು. ಆದರೆ ಪ್ರಸನ್ನ ಅವರು ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ. ಕೇಂದ್ರ ಸರ್ಕಾರದ ಜೊತೆಗೆ ಒಂದು ತಿಂಗಳೊಳಗೆ ಸಭೆ ನಿಗದಿ ಮಾಡಬೇಕು. ಇದು ಸತ್ಯಾಗ್ರಹದ ಮೊದಲ ಮೆಟ್ಟಿಲು. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿದರೆ, ಈ ಕುರಿತ ಪತ್ರ ನಮಗೆ ತಲುಪಿದರೆ ನಾಳೆ ಗ್ರಾಮ ಸೇವಾ ಸಂಘದ ಹಿರಿಯರ ಜೊತೆ ಸಭೆ ನಡೆಸಿ, ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ತಿಳಿಸಿದರು.
ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಡಿಸಿಎಂ, ಕೇಂದ್ರ ಸರ್ಕಾರವನ್ನು ಸುಮ್ಮನೆ ಎಳೆದು ತರುವುದಲ್ಲ. ರಾಜ್ಯ ಸರ್ಕಾರದಿಂದಲೇ ಇದೆಲ್ಲಾ ಜಾರಿ ಮಾಡಲಾಗುತ್ತಿದ್ದು, ಜಿಎಸ್ಟಿ ಕೌನ್ಸಿಲ್ನಲ್ಲಿ ಚರ್ಚೆ ಮಾಡಲಾಗುವುದು. ಈಗಾಗಲೇ ಖಾದಿ, ಗುಡಿ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಇದೆ. ಇದನ್ನು ಹೊರತುಪಡಿಸಿ ಹೆಚ್ಚುವರಿ ಆರ್ಥಿಕ ಸಹಾಯ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಉದ್ಯಮಗಳಲ್ಲಿ ಹೆಚ್ಚೆ ಹೆಚ್ಚು ಯಾಂತ್ರೀಕರಣವಾಗುತ್ತಿದೆ. ಇದರಿಂದ ಹೆಚ್ಚಿನ ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಸರ್ಕಾರ ಗಮನಹರಿಸಿ ಕೆಲಸ ಮಾಡುತ್ತದೆ ಎಂದರು.