ಬೆಂಗಳೂರು: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಎಸ್ಐಟಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.
ಈ ಪ್ರಕರಣದ ಕಿಂಗ್ ಪಿನ್ ಎನ್ನಲಾದ ನರೇಶ್ನ ಮಂಜುನಾಥ ನಗರ ನಿವಾಸದ ಮೇಲೆ ಸಹ ಎಸ್ಐಟಿ ದಾಳಿ ನಡೆಸಿ ಹಲವು ಮಾಹಿತಿ ಸಂಗ್ರಹಿಸಿದೆ. ಅಷ್ಟೇ ಅಲ್ಲದೆ ಈತನ ಜೊತೆ ನಿಕಟ ಸಂಪರ್ಕದಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ನಿವಾಸದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಖರೀದಿಸಿದ ರಶೀದಿಗಳು ಪತ್ತೆಯಾಗಿವೆ ಎನ್ನಲಾಗಿದೆ.
ವಿವಿಧ ಆಯಾಮಗಳಲ್ಲಿ ತನಿಖೆ:
ಯುವತಿ ಜೊತೆ ಸೇರಿ ಸಿಡಿ ಮಾಡುವುದಕ್ಕೂ ಮುನ್ನವೇ ಇವರು ಭರ್ಜರಿ ಪ್ಲಾನ್ ಮಾಡಿದ್ರಾ ಎಂಬ ಅನುಮಾನ ಮೂಡಿದೆ. ವೈರಲ್ ಆದ ಆಡಿಯೋದಲ್ಲಿ ಸಾಕ್ಷ್ಯ ಚಿತ್ರದ ಬಗ್ಗೆ ಯುವತಿ ಪ್ರಸ್ತಾಪಿಸಿದ್ದಳು. ಹಾಗಾಗಿ ನಿಜಕ್ಕೂ ಸಾಕ್ಷ್ಯ ಚಿತ್ರ ತೆಗೆಯಲು ಮುಂದಾಗಿದ್ರಾ? ಎಂಬ ಆಯಾಮದಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಸಾಕ್ಷ್ಯಚಿತ್ರದ ಉದ್ದೇಶ ಏನು? ಯಾರೆಲ್ಲಾ ಈ ಸಾಕ್ಷ್ಯ ಚಿತ್ರ ತೆಗೆಯುವಲ್ಲಿ ಕೆಲಸ ಮಾಡಿದ್ರು? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
30ಕ್ಕೂ ಹೆಚ್ಚು ಜನರ ವಿಚಾರಣೆ:
ಸಿಡಿ ಪ್ರಕರಣ ಸಂಬಂಧ ಆರೋಪಿ ಜೊತೆ ನಿಕಟ ಸಂಪರ್ಕದಲ್ಲಿರುವ ಎಲ್ಲರನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಸಿಡಿ ಬಿಡುಗಡೆಗೂ ಹಿಂದಿನ ದಿನ ಒಟ್ಟು ಐವರು ಆರ್.ಟಿ ನಗರದಲ್ಲಿ ಸಭೆ ಮಾಡಿದ್ದರು. ಐವರ ಮೊಬೈಲ್ ಒಂದೇ ಟವರ್ ಬಳಿ ಸುಮಾರು ಎರಡು ಗಂಟೆಗಳ ಕಾಲ ಇತ್ತು ಎಂಬುದನ್ನು ಪತ್ತೆ ಹಚ್ಚಿರುವ ತನಿಖಾಧಿಕಾರಿಗಳು, ಇದೇ ಕಾರಣಕ್ಕೆ ಐವರೊಂದಿಗೆ ನಿಕಟ ಸಂಪರ್ಕದಲ್ಲಿರುವರನ್ನು ವಿಚಾರಣೆ ನಡೆಸಿದ್ದಾರೆ. ಇಂದು ಕೂಡ ಹಲವರನ್ನು ವಿಚಾರಣೆಗೆ ಕರೆದಿರುವ ಅಧಿಕಾರಿಗಳು, ವಿಚಾರಣೆ ಮುಂದುವರೆಸಲಿದ್ದಾರೆ.
ಕಲ್ಲಹಳ್ಳಿ ಹೇಳಿಕೆ ಪಡೆದುಕೊಂಡ ಎಸ್ಐಟಿ:
ಮಾಜಿ ಸಚಿವರ ವಿರುದ್ಧ ಸಿಡಿ ಬಹಿರಂಗ ಪ್ರಕರಣದ ಬಗ್ಗೆ ದೂರು ಕೊಟ್ಟಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನಂತರ ದಿನಗಳಲ್ಲಿ ತಮ್ಮ ದೂರನ್ನು ವಾಪಸ್ ಪಡೆದಿದ್ದರು. ಈ ಕುರಿತು ಎಸ್ಐಟಿ ತನಿಖಾಧಿಕಾರಿಗಳಿಗೆ ಐದು ಪುಟಗಳ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ ತಮ್ಮ ಹೇಳಿಕೆಯನ್ನು ಪ್ರಕರಣದ ತನಿಖಾಧಿಕಾರಿ ಧರ್ಮೆಂದ್ರ ಅವರಿಗೆ ಕಳಿಸಿರುವ ದಿನೇಶ್ ಕಲ್ಲಹಳ್ಳಿ, ತಮಗೆ ಸಿಡಿ ಸಿಕ್ಕಿದ್ದು ಹೇಗೆ, ಕೊಟ್ಟವರು ಯಾರು ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಸಿಡಿ ಕೊಟ್ಟವನ ವಿರುದ್ಧ ಸಾಕ್ಷ್ಯ, ದಾಖಲೆಗಳನ್ನು ಸಂಗ್ರಹಿಸುವ ಕೆಲಸವನ್ನು ಎಸ್ಐಟಿ ಮಾಡುತ್ತಿದೆ. ಸಿಡಿ ರಿಲೀಸ್ಗೂ ಮುನ್ನಾ 7 ಬಾರಿ ಹಾಗೂ ಸಿಡಿ ಬಿಡುಗಡೆಯಾದ ಬಳಿಕ ಆತ 10 ಬಾರಿ ಫೋನ್ ಮಾಡಿ ಮಾತಾಡಿದ್ದಾನೆ. ಜೊತೆಗೆ ಮಾಧ್ಯಮಗಳಿಗೆ ಹೇಳಿಕೆ ಕೊಡುವಂತೆ ಸಹ ದಿನೇಶ್ ಕಲ್ಲಹಳ್ಳಿಗೆ ತಿಳಿಸಿದ್ದನಂತೆ.
ಯುವತಿ ಬಗ್ಗೆ ಮಾಹಿತಿ ಪಡೆದ ಬೈರತಿ ಸುರೇಶ್:
ಸಿಡಿಯಲ್ಲಿರುವ ಯುವತಿ ಆರ್.ಟಿ. ನಗರದಲ್ಲಿ ನೆಲೆಸಿದ್ದರ ಹಿನ್ನೆಲೆಯಲ್ಲಿ ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಯುವತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆಕೆಯ ಪಿಜಿ ಬಳಿ ಆಪ್ತರನ್ನು ಕಳುಹಿಸಿ ಮಾಹಿತಿ ಪಡೆದಿರುವ ಶಾಸಕ ಭೈರತಿ ಸುರೇಶ್, ಯುವತಿ ಎಷ್ಟು ದಿನದಿಂದ ವಾಸವಿದ್ದಳು, ಪಿಜಿ ಮಾಲೀಕರು ಯಾರು ಎಂದು ಮಾಹಿತಿ ಪಡೆದಿದ್ದಾರೆ.