ಬೆಂಗಳೂರು: ನಗರದ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀತ್ ಶರ್ಮಾ ತಿಳಿಸಿದ್ದಾರೆ.
ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಶ್ವದರ್ಜೆಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶರ್ಮಾ, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಹವಾ ನಿಯಂತ್ರಿತ ಟರ್ಮಿನಲ್ ಆಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಉದ್ಘಾಟಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರಧಾನಿ ಅವರಿಂದ ಸಮಯ ಕೋರಲಾಗಿದೆ. ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಿ, ರೈಲ್ವೆ ಟರ್ಮಿನಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿನ ಜನದಟ್ಟಣೆ ಮತ್ತು ರೈಲುಗಳ ಸಂದಣಿ ಕಡಿಮೆ ಮಾಡಲು ನೂತನ ಟರ್ಮಿನಲ್ ಸಹಕಾರಿಯಾಗಲಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿರುವ ಈ ಟರ್ಮಿನಲ್‌ನಲ್ಲಿ ಲಿಫ್ಟ್, ಎಸ್ಕಲೇಟರ್ ಓಡಾಟದ ಜಾಗವಿದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.
ನಂತರ ಯಲಹಂಕದ ರೈಲು ಗಾಲಿ ಕಾರ್ಖಾನೆಗೆ ಭೇಟಿ ನೀಡಿದ ಸುನೀತ್ ಶರ್ಮಾ, ನೈಋತ್ಯ ರೈಲ್ವೆ ಮತ್ತು ರೈಲು ಗಾಲಿ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್‌ಸಿಂಗ್, ನೈಋತ್ಯ ರೈಲ್ವೆ ಕೈಗೊಂಡಿರುವ ಕಾಮಗಾರಿಗಳು, ಯೋಜನೆಗಳ ಕುರಿತು ಮಾಹಿತಿ ನೀಡಿದರು.