ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಮುಂದಿನ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಜ.19 ರಂದು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್ ಅಧ್ಯಕ್ಷರನ್ನೊಳಗೊಂಡ ಸಭೆಯನ್ನು ಜೆಡಿಎಸ್ ಕರೆದಿದೆ.
![JDS office](https://etvbharatimages.akamaized.net/etvbharat/prod-images/kn-bng-04-jds-meeting-script-9024736_17012020174807_1701f_1579263487_340.jpg)
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆದೇಶದಂತೆ 28 ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು ಹಾಗೂ 198 ವಾರ್ಡ್ಗಳ ಅಧ್ಯಕ್ಷರ ಸಭೆ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಭಾನುವಾರ ನಡೆಯಲಿದೆ. ಪಕ್ಷ ಸಂಘಟನೆ, ಮುಂಬರುವ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತ ಕಾರ್ಯತಂತ್ರ ಹಾಗೂ ಜನವರಿ 23 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶದ ಬಗ್ಗೆ ಮುಖಂಡರು ಸಭೆಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.
ಸಭೆಗೆ ಮಹಿಳಾ ವಿಭಾಗ, ಯುವ, ಪರಿಶಿಷ್ಟ ಜಾತಿ ಮತ್ತು ಪಂಗಡ, ಕಾರ್ಮಿಕ, ಹಿಂದುಳಿದ, ಕ್ರೈಸ್ತ, ಅಲ್ಪಸಂಖ್ಯಾತ ವಿಭಾಗ ಹಾಗೂ ಸೇವಾದಳ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಅಧ್ಯಕ್ಷರ ಸಭೆ ನಡೆಯಲಿದ್ದು, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕ ಆರ್. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಟಿ.ಎ. ಶರವಣ, ಹೆಚ್.ಎಂ. ರಮೇಶ್ ಗೌಡ ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಬಿಬಿಎಂಪಿ ಚುನಾವಣೆ ಆಕಾಂಕ್ಷಿಗಳಿಗೆ ಈಗಿನಿಂದಲೇ ಕ್ಷೇತ್ರ ಹಾಗೂ ವಾರ್ಡ್ಗಳನ್ನು ನಿಗದಿಪಡಿಸಿ, ಚುನಾವಣೆ ಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡುವ ಸಾಧ್ಯತೆ ಇದೆ.