ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹೈಕಮಾಂಡ್ ನಾಯಕರೊಂದಿಗೆ ನಡೆಯುವ ಸಭೆಗಳಲ್ಲಿ ಭಾಗವಹಿಸಲು ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಿದರು.
ಇಂದು ಸ್ಕ್ರೀನಿಂಗ್ ಕಮಿಟಿ ಸಭೆ ಹಾಗೂ ನಾಳೆ ನಡೆಯುವ ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ನಾಳೆ ರಾತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಮುಖಂಡರ ಸಭೆ
ದಿಲ್ಲಿಗೆ ತೆರಳುವ ಮುನ್ನ ಇಂದು ಸಿದ್ದರಾಮಯ್ಯರನ್ನು ಬಾಗಲಕೋಟೆ ನಿಯೋಗ ಭೇಟಿ ಮಾಡಿ ಚರ್ಚಿಸಿತು. ನಿಯೋಗ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಯಿತು. ಸದ್ಯ ವೀಣಾ ಕಾಶಪ್ಪನವರ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆದಿದೆ. ರಕ್ಷಿತಾ ಕುರುಬ ಸಮುದಾಯದ ನಾಯಕಿ ಆಗಿದ್ದಾರೆ. ವೀಣಾ ಕಾಶಪ್ಪನವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.
ಜಿಲ್ಲೆಯಲ್ಲಿ ಕುರುಬರ ಸಮುದಾಯದವರು ಹೆಚ್ಚಿರುವ ಹಿನ್ನೆಲೆ ವೀಣಾ ಆಯ್ಕೆಗೆ ಸ್ಪರ್ಧೆ ಏರ್ಪಟ್ಟಿದೆ. ಇಂದು ಭೇಟಿ ನೀಡಿದ್ದ ಬಹುತೇಕ ನಾಯಕರು ಕಾರ್ಯಕರ್ತರು ಸಿದ್ದರಾಮಯ್ಯಗೆ ರಕ್ಷಿತಾ ಮೇಟಿ ಆಯ್ಕೆ ಮಾಡುವಂತೆ ಒತ್ತಡ ಹೇರಿದರು. ಇದೇ ಸಂದರ್ಭ ಇನ್ನೊಂದಿಷ್ಟು ಮಂದಿ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ಹಾಗಾಗಿ ವೀಣಾ ಕಾಶಪ್ಪನವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಧಾನಸಭೆ ಮುಂದಕ್ಕೆ
ದಿಧೀರ್ ದೆಹಲಿಗೆ ಸಿದ್ದರಾಮಯ್ಯ ಹೊರಟ ಹಿನ್ನೆಲೆ ಸಚಿವ ಹೆಚ್.ಡಿ. ರೇವಣ್ಣ ಜೊತೆಗಿನ ಕಾಂಗ್ರೆಸ್ ಮುಖಂಡರ ರಾಜೀ ಸಂಧಾನ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಹಾಸನ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ ನೀಡಿ ದಿಲ್ಲಿಗೆ ತೆರಳಿದ್ದಾರೆ. ನಾಳೆ ದೆಹಲಿಗೆ ತೆರಳಬೇಕಿದ್ದ ಸಿದ್ದರಾಮಯ್ಯ ಇಂದೇ ತುರ್ತಾಗಿ ತೆರಳಿದ್ದು, ಇಂದು ಹಮ್ಮಿಕೊಂಡಿದ್ದ ಹಲವು ಸಭೆಗಳನ್ನು ರದ್ದು ಮಾಡಿದ್ದಾರೆ.
ಹಾಸನ ನಾಯಕರ ಹೇಳಿಕೆ
ಸಿದ್ದರಾಮಯ್ಯ ನಿವಾಸ ಕಾವೇರಿಗೆ ಇಂದು ಬೆಳಗ್ಗೆಯೇ ಹಲವು ಹಾಸನ ಕಾಂಗ್ರೆಸ್ ನಾಯಕರು ಆಗಮಿಸಿದ್ದರು. ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚಿಸಿದರು. ಭೇಟಿ ಬಳಿಕ ಎಂಎಲ್ಸಿ ಗೋಪಾಲಸ್ವಾಮಿ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ಸಲ್ಲಿಕೆ ವೇಳೆ ನಾವೆಲ್ಲಾ ಭಾಗಿಯಾಗ್ತೇವೆ. ಸಿದ್ದರಾಮಯ್ಯನವರು ಕೂಡ ನಮಗೆ ಸೂಚನೆ ನೀಡಿದ್ದಾರೆ. ಇವತ್ತು ಹಾಸನ ಮುಖಂಡರು ಹಾಗೂ ಹೆಚ್ ಡಿ ರೇವಣ್ಣ ಜೊತೆ ಸಿದ್ದರಾಮಯ್ಯ ಸಭೆ ಮಾಡಬೇಕಿತ್ತು. ಆದ್ರೆ ಅದು ಶನಿವಾರಕ್ಕೆ ಮುಂದೂಡಿಕೆಯಾಗಿದೆ ಎಂದರು.
ಹಾಸನ ಕಾಂಗ್ರೆಸ್ ಮುಖಂಡ ಹೆಚ್ ಕೆ ಮಹೇಶ್ ಮಾತನಾಡಿ, ಎ ಮಂಜು ಬಿಜೆಪಿಗೆ ಹೋಗಿದ್ದಾರೆ. ಆದ್ರೆ ಅವರ ಪುತ್ರ ಕಾಂಗ್ರೆಸ್ಸಿನಲ್ಲಿ ಇರ್ತೇನೆ ಅಂತಾ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಚಿವ, ಎ ಮಂಜು ಪುತ್ರ ಮಂಥರಗೌಡ ಹಾಜರಿದ್ರೆ ಕಾಂಗ್ರೆಸ್ಸಿನಲ್ಲಿದ್ದಾರೆ ಅಂತಾ ಅರ್ಥ. ಬರದೇ ಇದ್ದ ಪಕ್ಷದಲ್ಲಿ ಅವ್ರು ಕಾಂಗ್ರೆಸ್ ನಲ್ಲಿ ಇಲ್ಲ ಅಂತಾ ಲೆಕ್ಕ. ಆಗ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದರು.