ಬೆಂಗಳೂರು: ಸಚಿವ ಸಿ.ಟಿ. ರವಿ ಹಾಗೂ ಸಚಿವ ಬಿ. ಶ್ರೀರಾಮುಲು ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ.
ಕುಡಿದ ಮತ್ತಿನಲ್ಲಿ ಅಪಘಾತವೆಸಗಿ ಸಾಯಿಸಿದವರ ಬಗ್ಗೆ ಹೇಳಿದರೆ, ಸಚಿವ ಸಿ ಟಿ ರವಿ ಯಾಕೆ ಹೆಗಲು ಮುಟ್ಟಿನೋಡಿಕೊಳ್ತಿದ್ದಾರೆ ಎಂದು ಅರ್ಥವಾಗಿಲ್ಲ. ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ. ನೀವು ಆ ಖಾತೆಯ ಸಚಿವರು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಹೇಳಿಕೆ ನೀಡಿರುವ ಸಚಿವ ಬಿ. ಶ್ರೀರಾಮುಲು ವಿರುದ್ಧ ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, 'ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು' ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ: "ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ತಿಳಿದಿಲ್ಲ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಿನ್ನೆ ಉತ್ತರ ಕನ್ನಡಜಿಲ್ಲೆ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಚಿವ ಸಿ ಟಿ ರವಿ, ಕೊಲೆಗೂ ಅಪಘಾತಕ್ಕೂ ವ್ಯತ್ಯಾಸ ತಿಳಿಯದಿರುವ ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್. ಸಿದ್ದರಾಮಯ್ಯನವರ ಮನಸ್ಥಿತಿ ಎಷ್ಟು ಕೆಳಮಟ್ಟಕ್ಕೆ ಹೋಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಮದ್ಯಪಾನದ ಅಭ್ಯಾಸ ಇಲ್ಲ. ಅದು ನನ್ನ ಕ್ಷೇತ್ರದ ಜನತೆಗೆ ಗೊತ್ತು. ಕುಡಿದು ತೂರಾಡುತ್ತಿದ್ದವರು ಯಾರು ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಟೋಲ್ಗೇಟ್ನಲ್ಲಿದ್ದ ಸಿಸಿಟಿವಿ ಕ್ಯಾಮರಾ ಕೂಡ ಅಪಘಾತಕ್ಕೆ ಕಾರಣ ಏನು ಎಂಬ ಸಾಕ್ಷಿಯನ್ನು ನೀಡಿದೆ. ಅದು ಅರಿವಿಲ್ಲದವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಇದ್ದದ್ದು ದುರಾದೃಷ್ಟಕರ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.