ಬೆಂಗಳೂರು: ವರ್ಚುವಲ್ ಸಭೆಯ ಭಾಷಣದ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್ಎಸ್ಎಸ್ ನಾಯಕ ಬಿ.ಎಲ್.ಸಂತೋಷ್ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಎಲ್.ಸಂತೋಷ್ ಅವರು ನಿನ್ನೆ ಮಾಡಿರುವ ಆರೋಪಗಳಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಸಂತೋಷ್ ಅವರು ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲಾ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದು ಸವಾಲು ಹಾಕಿದ್ದಾರೆ.
![Siddaramaiah tweet on RSS leader Bl santhosh](https://etvbharatimages.akamaized.net/etvbharat/prod-images/kn-bng-03-siddu-tweet-script-7208077_07072020131109_0707f_1594107669_566.jpg)
ನಿಮ್ಮ ಲೆಕ್ಕಕೊಡಿ: ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಅವರು ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ಪ್ರಧಾನಿ ಮೋದಿ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ 'ಪಿಎಂ ಕೇರ್ಸ್' ನಿಧಿಯ ಲೆಕ್ಕಕೊಡಿ ಎಂದು ಕೇಳಿದ್ದಾರೆ.
ಮೋದಿಯಿಂದ ಉತ್ತರ ಕೊಡಿಸಿ: ಚೀನಾ ಸೇನೆ ಎರಡು ಕಿ.ಮೀ. ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಮೋದಿ. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ ಎಂದಿದ್ದಾರೆ.
![Siddaramaiah tweet on RSS leader Bl santhosh](https://etvbharatimages.akamaized.net/etvbharat/prod-images/kn-bng-03-siddu-tweet-script-7208077_07072020131109_0707f_1594107669_274.jpg)
ಬಿಎಲ್ ಸಂತೋಷ್ ಅವರೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀವು ನೀಡಿರುವ ಶಹಬ್ಬಾಶ್ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಬ್ಬಾಶ್ಗಿರಿ ಕೊಡಬಹುದೇನೋ? ಎಂದು ತೀಕ್ಷ್ಣವಾಗಿ ತಿರುಗೇಟು ಕೊಟ್ಟಿದ್ದಾರೆ.
![Siddaramaiah tweet on RSS leader Bl santhosh](https://etvbharatimages.akamaized.net/etvbharat/prod-images/kn-bng-03-siddu-tweet-script-7208077_07072020131109_0707f_1594107669_597.jpg)