ಬೆಂಗಳೂರು : ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಕಾರ್ಪೊರೇಟ್ ಕಂಪನಿ ಲಾಬಿ ಇದೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಯ್ದೆ ತಿದ್ದುಪಡಿಯಿಂದ ಕೃಷಿ ಹೊರತಾಗಿ ರೈತರ ಜಮೀನನ್ನು ಬೇರೆ ಕಾರಣಕ್ಕಾಗಿ ಉಪಯೋಗ ಮಾಡಬಹುದು. ಬೆಂಗಳೂರು ಸುತ್ತಮುತ್ತ ಮಜಾ ಮಾಡಲು ಫಾರ್ಮ್‌ಹೌಸ್ ಇವೆ. ತಿದ್ದುಪಡಿಯಿಂದ ಇನ್ನೂ ಹೆಚ್ಚಾಗಲಿವೆ. ಕಾಯ್ದೆ ತಿದ್ದುಪಡಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂ ಸುಧಾರಣಾ ಕಾಯ್ದೆ 1961ಕ್ಕೆ ಆತುರವಾಗಿ ತಿದ್ದುಪಡಿ ತಂದಿದ್ದಾರೆ. ಈ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನ ಎಂದು ರೈತ ಸಂಘಟನೆಗಳು, ಕಾರ್ಮಿಕ, ದಲಿತ ಸಂಘಟನೆ ಹೇಳಿಕೆ ನೀಡಿವೆ. ರೈತ ಸಂಘಟನೆಗಳು ಸೆ. 28ರಂದು ಬಂದ್‌ಗೆ ಕರೆ ಕೂಡ ನೀಡಿವೆ. ಸಿಎಂ ಜೊತೆಗೆ ನಡೆದ ಚರ್ಚೆ ಕೂಡ ವಿಫಲವಾಗಿದೆ. ಹಿಂದೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಂಡಾಗಲೇ ಇದನ್ನು ನಾವು ವಿರೋಧ ಮಾಡಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಬೇಡ, ರೈತರ ಹಿತಕ್ಕಾಗಿ ಈ ಕಾಯ್ದೆಗೆ ನಮ್ಮ ವಿರೋಧ ಎಂದು ಹೇಳಿದರು.
ಜನ ಒಪ್ಪದಿದ್ದರೂ ಇದನ್ನು ಕಾನೂನು ಮಾಡಲು ಮುಂದಾಗಿದ್ದೀರಿ. ಸರ್ವೆ ವರದಿಗಳು ತಿದ್ದುಪಡಿಯ ವಿರುದ್ಧವಾಗಿವೆ. ಬಿ ಡಿ ಜತ್ತಿ ಕಾಲದಲ್ಲಿ ಮಾಡಿದ ಕಾನೂನು ಎಂದು ಸಚಿವ ಆರ್ ಅಶೋಕ್ ಹೇಳುತ್ತಾರೆ. ಆದರೆ, ಅಲ್ಲ, ಏಕೀಕರಣದ ಬಳಿಕ 1957ರಲ್ಲಿ ರಚನೆಯಾದ ಸಮಿತಿ ಶಿಫಾರಸು ಆಧಾರದ ಮೇಲೆ 1961ರ ಭೂ ಸುಧಾರಣಾ ಕಾಯ್ದೆ ರಚನೆ ಆಗಿದೆ ಎಂದು ಸಿದ್ದರಾಮಯ್ಯನವರು ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಗೇಣಿದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1961ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ. ಕಾಗೋಡು ಹೋರಾಟ, ಗೇಣಿದಾರರಿಗೆ ಇನ್ನಷ್ಟು ರಕ್ಷಣೆ, ಭೂ ಒಡೆತನದ ನೀಡುವ ಹೋರಾಟದ ಫಲವಾಗಿ ಭೂಸುಧಾರಣಾ ಕಾಯ್ದೆ ಜಾರಿಯಾಗಿದೆ. ದೇವರಾಜ್ ಅರಸು ಕಾಲದಲ್ಲಿ ಸೆಕ್ಷನ್ 63ರ ಭೂ ಒಡೆತನದ ಮಿತಿ 10 ಯುನಿಟ್ ಇರಬೇಕು.(54 ಎಕರೆ) ಆದರೆ, 20 ಯುನಿಟ್ಸ್‌ಗಿಂತ ಹೆಚ್ಚು ಭೂ ಒಡೆತನ ಹೊಂದಿಕೊಳ್ಳಲು ಅವಕಾಶ ಇರಲಿಲ್ಲ. ಇವಾಗ ತಿದ್ದುಪಡಿಯ ಮೂಲಕ ಭೂ ಒಡೆತನದ ಮಿತಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಕೈಗಾರಿಕಾ ಬೆಳವಣಿಗೆ ಕಾರಣ ನೀಡಿ ಕಾಯ್ದೆಗೆ ತಿದ್ದುಪಡಿ ಎಂದು ಹೇಳುತ್ತಾರೆ. ಕಾಯ್ದೆಯಿಂದ ತಳಸಮುದಾಯಕ್ಕೆ ಅನುಕೂಲವಾಗಿದೆ. ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಭೂಸುಧಾರಣೆಯ ಆತ್ಮವನ್ನು ಕಿತ್ತು ಹಾಕಿದ್ದಾರೆ. ಗೇಣಿದಾರರನ್ನು ಮಾಲೀಕರನ್ನಾಗಿ ಮಾಡಿದ ಕಾನೂನನ್ನು ನಿರ್ಜೀವ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯ ಇಲ್ಲ. ಯಾರ ಜೊತೆಗೂ ಚರ್ಚೆ ಮಾಡದೆ ತರಾತುರಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಲಂಚದ ಕಾರಣ ನೀಡಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದೆಂದು ಸರ್ಕಾರ ಹೇಗೆ ಹೇಳುತ್ತದೆ ಎಂದ ಸಿದ್ದರಾಮಯ್ಯ, ಲಂಚ ಕಾರಣ ನೀಡಿ ಜನಪರ ವ್ಯವಸ್ಥೆ ರದ್ದು ಮಾಡಲು ಸಾಧ್ಯನಾ? ಇದು ಜನ ವಿರೋಧಿ ಧೋರಣೆ ಹಾಗೂ ಸರ್ಕಾರದ ಅಸಮರ್ಥತೆ ಎಂದು ವಾಗ್ದಾಳಿ ನಡೆಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಆಹಾರ ಉತ್ಪಾದನೆ 138 ಲಕ್ಷ ಟನ್ ಇದೆ. ಕಾಯ್ದೆ ತಿದ್ದುಪಡಿ ಆದರೆ ಆಹಾರ ಉತ್ಪಾದನೆ ಸ್ವಾವಲಂಬನೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾಯ್ದೆ ತಿದ್ದುಪಡಿಯಲ್ಲಿ ಯಾವ ಸದುದ್ದೇಶ ಇಲ್ಲ, ಕಾರ್ಪೊರೇಟ್ ಒತ್ತಡಕ್ಕೆ ಮಣಿದು ರೈತ ಸಮುದಾಯದ ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸಮರ್ಥಿಸಿಕೊಂಡ ಕಂದಾಯ ಸಚಿವ ಆರ್. ಅಶೋಕ್ ಅವರು, ಬೇರೆ ರಾಜ್ಯಗಳಲ್ಲಿ ಇಲ್ಲದೆ ಇರುವ ಕಾನೂನು ನಮ್ಮ ರಾಜ್ಯದಲ್ಲಿದೆ. ಇದರಿಂದ ಸಮಸ್ಯೆ ಆಗುತ್ತಿದೆ. ರೈತರ ಹಿತಾಸಕ್ತಿ ಇಟ್ಟುಕೊಂಡು ಕಾಯ್ದೆ ತಿದ್ದುಪಡಿ, ಸಣ್ಣ ಹಿಡುವಳಿದಾರರಿಗೆ ಯಾವುದೇ ತೊಂದರೆ ಆಗದಂತೆ ಕಾಯ್ದೆ ಜಾರಿ ಮಾಡಲಾಗುವುದು. ಅಲ್ಲದೇ ನೀರಾವರಿ ಜಮೀನನ್ನು ಯಾವುದೇ ಕಾರಣಕ್ಕಾಗೂ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ಇದು ಸದುದ್ದೇಶದಲ್ಲಿ ತಂದಿರುವ ತಿದ್ದುಪಡಿ ಎಂದರು.