ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಭೇರಿ ಭಾರಿಸಿದೆ. ಇದು ನಮಗೆ ಮೊದಲೇ ಗೊತ್ತಿತ್ತು ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾತನಾಡಿದ ಅವರು, ಅಲ್ಲಿ ನಾವು ನಾಲ್ಕೈದು ಸೀಟು ಗೆಲ್ತೇವೆ ಅಂದುಕೊಂಡಿದ್ದೆವು. ಆಪ್ ಸರ್ಕಾರವನ್ನೇ ಮತ್ತೆ ತರಬೇಕು ಎಂದು ಕೇಜ್ರಿವಾಲ್ ಬಯಸಿದ್ದರು. ಅದರಂತೆ ಜನ ಅವರನ್ನ ಕೈಹಿಡಿದಿದ್ದಾರೆ. ಇದರಿಂದ ನಮಗೇನು ಲಾಸ್ ಇಲ್ಲ. ಆದರೆ, ಬಿಜೆಪಿಯವರು ಎಲ್ಲ ಸೋರ್ಸ್ ಇಟ್ಕೊಂಡಿದ್ರು. ಕೇಂದ್ರ ಸರ್ಕಾರ, ಸಂಸದರು ಇದ್ರೂ ಗೆಲ್ಲೋಕೆ ಆಗ್ಲಿಲ್ಲ ಎಂದರು.
ಅವನ್ಯಾರೋ ಸಂಸದ ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ಅಂತಾನೆ. ಕಳೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಸೋಲ್ತಿದೆ. ಕೇಜ್ರೀವಾಲ್ ಒಳ್ಳೆ ಕೆಲಸ ಮಾಡಿದ್ದರು. ಜಿಡಿಪಿ ಕುಸಿತದಿಂದ ಜನ ರೋಸಿ ಹೋಗಿದ್ದರು. ಹೀಗಾಗಿ ಜನ ಅಲ್ಲಿ ಆಪ್ ಕೈಹಿಡಿದಿದ್ದಾರೆ. ಆದರೆ, ಒಂದಂತೂ ಸತ್ಯ, ಕಾಂಗ್ರೆಸ್ ಮುಕ್ತ ಮಾಡ್ತೇವೆ ಅಂತ ಬಿಜೆಪಿಯವರು ಅನ್ನುತ್ತಿದ್ರು. ಈಗ ಜನರೇ ಬಿಜೆಪಿ ಮುಕ್ತ ಭಾರತ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸ್ಥಳೀಯ ಸಂಸ್ಥೆಗಳ್ಳಿ 'ಕೈ' ಮುಂದೆ: ಸ್ಥಳೀಯ ಸಂಸ್ಥೆಗಳಲ್ಲೂ ನಾವೇ ಮುಂದಿದ್ದೇವೆ. ಸಿಂದಗಿ, ಸಿರಗುಪ್ಪ, ಚಿಕ್ಕಬಳ್ಳಾಪುರ, ಹುಣಸೂರಿನಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ. ನಾವು 69 ಬಿಜೆಪಿಯವರು 58 ಗೆದ್ದಿದ್ದಾರೆ. ನಿನ್ನೆ ಚಿಕ್ಕಬಳ್ಳಾಪುರದವರೊಬ್ಬರು ಮಂತ್ರಿಯಾಗಿದ್ದಾರೆ. ಅವರು ಏನು ಮಾಡಿದ್ರೂ ಅಲ್ಲಿ ವರ್ಕೌಟ್ ಆಗಿಲ್ಲ. ಅಲ್ಲಿ ನಮಗೆ ಕ್ಲಿಯರ್ ಮೆಜಾರಿಟಿ ಬಂದಿದೆ. ಹೊಸಕೋಟೆಯಲ್ಲಿ ನಮ್ಮವರಿಗೆ ಖರ್ಚು ಮಾಡೋ ಶಕ್ತಿಯಿರಲಿಲ್ಲ. ಎಂಟಿಬಿ ನಾಗರಾಜು ಹಣ ಖರ್ಚು ಮಾಡಿದ್ದಾನೆ. ಅದಕ್ಕೆ ಹೊಸಕೋಟೆಯಲ್ಲಿ ನಮಗೆ ಹಿನ್ನಡೆಯಾಗಿದೆ ಎಂದರು.
'ದರಿದ್ರ ಸರ್ಕಾರ'ಕ್ಕೆ ಸದನದಲ್ಲಿ ಉತ್ತರ: ದರಿದ್ರ ಸರ್ಕಾರ ಎಂದಿದ್ದಕ್ಕೆ ಸದನದಲ್ಲಿ ಮಾತನಾಡ್ತೇವೆ ಎಂದಿದ್ದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಅದೇನು ಉತ್ತರ ಕೊಡ್ತಾರೋ ಕೊಡ್ಲಿ. ಅವರು ಸದನ ನಡೆಸ್ತಾರೋ ಇಲ್ವೋ ಅದೇ ಗೊತ್ತಿಲ್ಲ. ಹೆದರಿಕೊಂಡು ಬೆಳಗಾವಿಯಲ್ಲಿ ಸದನವನ್ನೇ ನಡೆಸಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಲಪಾಡ್ ಮೇಲೆ ಅಪಘಾತ ಪ್ರಕರಣದ ಆರೋಪ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲವೆಂದರು.