ಬೆಂಗಳೂರು: 2021-22 ಕ್ಕೆ ರಾಜ್ಯ ಬಜೆಟ್ ಮಂಡಿಸಲು ಅಧಿವೇಶನ ಕರೆದಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಆಯವ್ಯಯ ಮಂಡಿಸಲು ಯಾವುದೇ ನೈತಿಕತೆ ಇಲ್ಲ. ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಮತ್ತು ಸಚಿವ ನಿರಾಣಿ ಹೌಸಿಂಗ್ ಬೋರ್ಡ್ ಪ್ರಕರಣವೊಂದರ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶಿಸಿತ್ತು. ಇದಕ್ಕೆ ಜ.27 ರಂದು ಸುಪ್ರೀಂ ಕೋರ್ಟ್ನಲ್ಲಿ ಹೈಕೋರ್ಟ್ ಆದೇಶಕ್ಕೆ ಸ್ಟೇ ಕೇಳಿ ಅಪೀಲು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿತು. ಈ ವೇಳೆ ಪೊಲೀಸರು ಇವರನ್ನು ಬಂಧಿಸಬಹುದಿತ್ತು. ಆದರೆ, ಸಿಎಂ ಅವರನ್ನು ಬಂಧಿಸಲು ಸಾಧ್ಯವೇ ಎಂದು ಸುಪ್ರೀಂ ನ್ಯಾಯಮೂರ್ತಿ ಹೇಳಿದರು. ಹೀಗಾಗಿ ಸದನದಲ್ಲಿ ಸಿಎಂ ಬೇಲ್ ಮೇಲಿದ್ದಾರೆ. ಅದಕ್ಕೆ ನನ್ನ ಪ್ರಕಾರ ಸಿಎಂ ಬಿಎಸ್ವೈ ಮತ್ತು ಸಚಿವ ನಿರಾಣಿ ಇಬ್ಬರೂ ಸದ್ಯ ನಿರೀಕ್ಷಣಾ ಜಾಮೀನಿನ ಮೇಲಿದ್ದಾರೆ ಎಂದರು.
ಸಚಿವರಾದ ಹೆಬ್ಬಾರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಸುಧಾಕರ್, ಸೋಮಶೇಖರ್, ನಾರಾಯಣ ಗೌಡ ಸೇರಿ 6 ಸಚಿವರು ಸಿಡಿ ಪ್ರಕರಣದ ಬಳಿಕ ಭಯದಿಂದ ಓಡಿಹೋಗಿದ್ದಾರೆ. ಯಾಕೆ ಇವರಿಗೆ ಭಯ. ಹೆದರಿಕೆ ಬರಬೇಕೆಂದರೆ ಇವರು ತಪ್ಪಿತಸ್ಥರಾಗಿರಬೇಕು. ಏನೋ ಇರಬಹುದು. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುವ ಹಾಗೆ. ಇವರು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು ಮಾಧ್ಯಮಗಳ ಸ್ವಾತಂತ್ರ್ಯ ಹರಣ. ಕರ್ಮಕಾಂಡ ಸಿಡಿಗಳನ್ನು ಟೆಲಿಕಾಸ್ಟ್ ಮಾಡಬೇಡಿ ಎಂಬುದೇ ಅವರ ಉದ್ದೇಶ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತುಕೊಂಡಿದೆ. ಅಧಿಕಾರದಲ್ಲಿರು ಇವರಿಗೆ ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ಸೇರಿ ಅನೇಕ ಸಚಿವರಿಗೆ ನೈತಿಕತೆಯಿಲ್ಲ. ಸರ್ಕಾರದಲ್ಲಿ ಸಿಎಂ ಹಾಗೂ ಸಚಿವ ಸ್ಥಾನಗಳಲ್ಲಿ ಮುಂದುವರೆಯಲು ನೈತಿಕತೆಯಿಲ್ಲ. ಎಲ್ಲರೂ ರಾಜೀನಾಮೆ ನೀಡಬೇಕು. ನಾವು ಬಜೆಟ್ ವೇಳೆ ಸಭಾತ್ಯಾಗ ಮಾಡುತ್ತೇವೆ ಎಂದರು.