ಬೆಂಗಳೂರು : ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ಗೆ ತಿರುಗೇಟು ನೀಡಿರುವ ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೆಚ್ಡಿಕೆ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವನ್ನು ನಿರ್ಧಾರ ಮಾಡುವುದು ಮತದಾರರು. ಮತದಾರರು ಕೊಟ್ಟ ತೀರ್ಪನ್ನು ನಾವು ಸ್ವೀಕಾರ ಮಾಡಬೇಕು. ನಾನು ಸೋತಿದ್ದೇನೆ. ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ?. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ.
ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ರು ಅಂತಾನೇ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈಕಟ್ಟಿ ನಿಲ್ಲಲಿ, ಕಣ್ಣೀರು ಹಾಕಲಿ ಎಂದು ಟಾಂಗ್ ಕೊಟ್ಟರು. ಈಗ ರಾಜ್ಯದ ಜನರ ಮುಂದೆ ಕಣ್ಣೀರು ಹಾಕುತ್ತಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣೀರು ಹಾಕಲಿ. ಇವರ ಭಾಷೆ ಇವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಜನರಿಗೆ ತೆರಿಗೆ ಬರೆ ಹಾಕಬೇಡಿ.. ಶುಕ್ರವಾರದಂದು ಸರ್ಕಾರ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದೆ. ಈಗ ತೆರಿಗೆ ಏರಿಕೆ ಮಾಡುವುದು ಸರಿಯಲ್ಲ. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ. ಈಗಾಗಲೇ ಕೊರೊನಾದಿಂದ ಜನರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣಪುಟ್ಟ ಆದಾಯ ಇರೋರಿಗೆ ತುಂಬಾ ಕಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.
ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು. ತಮಿಳುನಾಡಿನ ಹೊಗೇನಕಲ್ ಯೋಜನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಈ ಬಗ್ಗೆ ಕಾನೂನು ತಜ್ಞರನ್ನು ಸರ್ಕಾರ ಸಂಪರ್ಕಿಸಬೇಕು. ತಮಿಳುನಾಡು ಯೋಜನಾ ವರದಿಯನ್ನು ಸಿದ್ಧ ಮಾಡುತ್ತಿದೆ. ಕೇಂದ್ರ ಅದನ್ನು ಒಪ್ಪಬಾರದು. ಅದಕ್ಕೆ ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು ಎಂದರು.
ಇದನ್ನೂ ಓದಿ: ನಾಯಕನ ಸೃಷ್ಟಿಸುವ ಯೋಗ್ಯತೆ ಇಲ್ಲ, ಪಕ್ಷ ಕಟ್ಟುವ ಧಂ ಇಲ್ಲ: ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಕಿಡಿ
ಇನ್ನೂ 7 ದಿನದ ಪಾದಯಾತ್ರೆ ಬಾಕಿ ಇದೆ. ಮೇಕೆದಾಟು ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನ್ಯಾಯಾಧೀಕರಣ ತೀರ್ಪು ನೀಡಿದೆ ಎಂದು ಹೇಳಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ