ಬೆಂಗಳೂರು: ರಾಜ್ಯದ ಬರಹಗಾರರು, ಚಿಂತಕರು ಮತ್ತು ಪ್ರತಿಪಕ್ಷಗಳ ಮುಖಂಡರುಗಳಿಗೆ ಬರುತ್ತಿರುವ ಜೀವ ಬೆದರಿಕೆ ಕರೆ ಹಾಗೂ ಪತ್ರಗಳನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಪದೇ ಪದೆ ಜೀವ ಬೆದರಿಕೆಯ ಪತ್ರಗಳನ್ನು ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಪೋಸ್ಟ್ ಮಾಡಲಾಗುತ್ತಿದೆ. ಕುಂ. ವೀರಭದ್ರಪ್ಪನವರಿಗೆ 6 ಪತ್ರ, ಬಂಜಗೆರೆ ಜಯಪ್ರಕಾಶ್ ಅವರಿಗೆ 5 ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್.ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್.ಜಿ.ಸಿದ್ದರಾಮಯ್ಯ ಮತ್ತು ವಸುಂಧರ ಭೂಪತಿಯವರುಗಳಿಗೆ ಒಂದೊಂದು ಪತ್ರಗಳನ್ನು ಬರೆಯಲಾಗಿದೆ ಎಂದಿದ್ದಾರೆ.
ಇವರುಗಳೆಲ್ಲಾ ಪ್ರಜಾತಾಂತ್ರಿಕ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ಹಲವು ಬಾರಿ ಆಡಳಿತಾರೂಢ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇದನ್ನು ಸಹಿಸದ ಕಿಡಿಗೇಡಿಗಳು ಜೀವ ಬೆದರಿಕೆಗಳನ್ನು ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅನೇಕ ಸಾರಿ ನನ್ನ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಬಂದು ಹೀನ ಮನೋವೃತ್ತಿ ತೋರುವವರೂ ಇದ್ದಾರೆ. ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಸ್ವತಃ ಡಿಜಿಯವರ ಬಳಿ ನಾನು ಈ ಕುರಿತು ಮಾತನಾಡಿದ್ದೆ.
ಇತ್ತೀಚೆಗೆ ಟಿವಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ನನಗೆ ಗುಂಡು ಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಹಾಗೂ ಪತ್ರಗಳ ಕುರಿತು ದೂರು ದಾಖಲಿಸಲಾಗಿದೆ. ಆದರೂ, ಇದುವರೆಗೆ ಸರ್ಕಾರ ಎಫ್‍ಐಆರ್ ದಾಖಲಿಸಿಲ್ಲ. ಇದೇ ವಿಷಯಕ್ಕೆ ಹಲವು ಬಾರಿ ದೂರು ದಾಖಲಿಸಿದರೂ ಎಫ್‍ಐಆರ್ ಮಾಡಿ ತನಿಖೆ ನಡೆಸದಿರುವುದು ಸರ್ಕಾರದ ಬೇಜವಾಬ್ದಾರಿಯುತವಾದ ನಡವಳಿಕೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧಕ್ಕೆ ಆಗಮಿಸಿದ ರಾಷ್ಟ್ರಪತಿ ಚುನಾವಣಾ ಬ್ಯಾಲೆಟ್, ಸ್ಟ್ರಾಂಗ್ ರೂಂನಲ್ಲಿ ಭದ್ರ