ಬೆಂಗಳೂರು: ಕಾಂಗ್ರೆಸ್ ಸಂಕಲ್ಪ ಸಮಾವೇಶಕ್ಕಾಗಿ ಆಗಮಿಸುತ್ತಿದ್ದ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಷ್ಟ್ರಗೀತೆ ಕೇಳುತ್ತಿದ್ದಂತೆ ಕಾರಿನಿಂದ ಇಳಿದು ವಿಶೇಷ ಗೌರವ ಸಲ್ಲಿಸಿದರು.
ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಬೆಂಗಳೂರು ವಲಯ ವ್ಯಾಪ್ತಿಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೊಂಚ ತಡವಾಗಿ ಆಗಮಿಸಿದ ಸಿದ್ದರಾಮಯ್ಯನವರು ಪ್ಯಾಲೇಸ್ ಹೊರಭಾಗದಲ್ಲಿ ಸ್ಥಾಪಿಸಿದ್ದ ಇಂದಿರಾ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಕಾರಿನಿಂದ ಇಳಿದರು. ಇದೇ ಸಂದರ್ಭಕ್ಕೆ ಸರಿಯಾಗಿ ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿತ್ತು. ರಾಷ್ಟ್ರಗೀತೆ ಹಾಡುತ್ತಿರುವುದು ಅವರ ಗಮನಕ್ಕೆ ಬರುತ್ತಿದ್ದಂತೆ ಕಾರಿನ ಪಕ್ಕದಲ್ಲಿ ನಿಂತು ಗೌರವ ಸೂಚಿಸಿದರು.
ಇಂದಿರಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ನೇರವಾಗಿ ವೇದಿಕೆಯತ್ತ ತೆರಳಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಸಭೆಯಲ್ಲಿ ಭಾಗವಹಿಸಿ, ಮುಖಂಡರ ಮಾತು ಆಲಿಸಿದ ಸಿದ್ದರಾಮಯ್ಯ, ಕೊನೆಗೆ ಸಮಾರೋಪ ಭಾಷಣ ಮಾಡಿದರು.