ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣಾ ಪ್ರಚಾರದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಮತ್ತು ಬಿಜೆಪಿಯ ಹಲವು ಮುಖಂಡರ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರದಲ್ಲಿ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕೆಂದು ಬಿಜೆಪಿ ಕಾನೂನು ಪ್ರಕೋಷ್ಠದ ಘಟಕವು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರನ್ನು ಒತ್ತಾಯಿಸಿದೆ.
ಈ ಕುರಿತು ಪ್ರಕೋಷ್ಠದ ಸಂಚಾಲಕ ಎಸ್.ಎಸ್.ಮಿಟ್ಟಲ್ ಕೋಡ್, ಸಹ ಸಂಚಾಲಕರಾದ ಯೋಗೇಂದ್ರ ಹೆಚ್.ಎಲ್. ಶ್ರೀನಿಧಿ, ಎಂ.ಯಶವಂತ್, ವಿಪಿನ್, ಶೇಖರ್ ನೇತೃತ್ವದ ನಿಯೋಗ ಸೇರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್. ಅವರ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಮತ್ತು ಹಲವು ಮುಖಂಡರ ವಿರುದ್ಧ ಮಾತನಾಡಿ, "ಈ ಎಲ್ಲರೂ ಯಾರಿಗೂ ಹೇಳದೆ 25-30 ಕೋಟಿ ರೂಪಾಯಿ ಪಡೆದುಕೊಂಡು ಬಿಜೆಪಿಗೆ ಹೋದರು. ಮುನಿರತ್ನ ಅವರು 50 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅಷ್ಟಕ್ಕೆ ನಿಲ್ಲಿಸದೆ ಸಿಎಂ ಬಿಎಸ್‌ವೈ ಚೆಕ್ ಮೂಲಕ ಲಂಚ ಪಡೆದರೆ, ಮೊಮ್ಮಗ ಶಶಿಧರ ಮರಡಿ ಆರ್‌ಟಿಜಿಎಸ್ ಮೂಲಕ ತೆಗೆದುಕೊಳ್ಳುತ್ತಾರೆ. ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ' ಎಂದು ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹೇಳಿಕೆಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕು ಮತ್ತು ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿದ್ದಾರೆ.