ಬೆಂಗಳೂರು: ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಇಂದು ಬೆಳಗ್ಗೆ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಅವರು, ನಿನ್ನೆ ಹಾಗೂ ಇಂದು ಹಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ತೆರಳಿದ್ದು, ಮಂಗಳವಾರ ಸಂಜೆ ರಾಷ್ಟ್ರೀಯ ನಾಯಕರ ಜೊತೆ ಉಭಯ ನಾಯಕರು ಮಾಧ್ಯಮಗೋಷ್ಟಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು. ಇಂದು ಬೆಳಗ್ಗೆ ಡಿ.ಕೆ. ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಸಿದ್ದರಾಮಯ್ಯ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಇಂದು ಬೆಳಗ್ಗೆ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಹಿಂದೆ ಅವರು ಸಿಎಂ ಆಗಿದ್ದ ಸಂದರ್ಭ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕಾಂಗ್ರೆಸ್ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ದಿಗ್ವಿಜಯ್ ಸಿಂಗ್, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕೈಗೊಳ್ಳಬಹುದಾದ ಪಕ್ಷ ಸಂಘಟನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ, ಸಲಹೆ-ಸೂಚನೆ ನೀಡಿದರು.

ಇದಾದ ಬಳಿಕ ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಹುಟ್ಟುಹಬ್ಬದ ಶುಭಾಶಯ ಕೋರಿದರು. ಕಳೆದ ಎರಡು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರಿನ ಬದಲು ಬೇರೆ ಸ್ಥಳಗಳಲ್ಲಿ ಸರಳವಾಗಿ ಆಚರಿಸಿಕೊಳ್ಳುತ್ತಿರುವ ಮಲ್ಲಿಕಾರ್ಜುನ ಖರ್ಗೆ, ಈ ಬಾರಿಯೂ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ದೆಹಲಿಯಲ್ಲಿ ತಂಗಿದ್ದಾರೆ. ರಾಜ್ಯಸಭೆ ಪ್ರತಿಪಕ್ಷದ ನಾಯಕರಾಗಿರುವ ಹಿನ್ನೆಲೆ, ಪಕ್ಷ ಸಂಘಟನೆ ವಿಚಾರವಾಗಿ ಅವರೊಂದಿಗೂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.
ಇವರ ಭೇಟಿಯ ಬಳಿಕ ಪಕ್ಷದ ಹಿರಿಯ ನಾಯಕರಾದ ಎ.ಕೆ. ಆ್ಯಂಟನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಸಾಕಷ್ಟು ಸಲಹೆ-ಸೂಚನೆಗಳನ್ನು ಅವರಿಂದ ಪಡೆದಿದ್ದಾರೆ. ನಿರಂತರವಾಗಿ ಹಲವು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತಿರುವ ಸಿದ್ದರಾಮಯ್ಯ ರಾಜಕೀಯ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

ಮುಂದಿನ ಸಿಎಂ ವಿಚಾರವಾಗಿ ರಾಜ್ಯದಲ್ಲಿ ನಡೆದ ಸಾಕಷ್ಟು ಚರ್ಚೆಯಲ್ಲಿ ಇವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಆಕಾಂಕ್ಷಿಗಳಲ್ಲಿ ಪ್ರಬಲ ಪ್ರಬಲ ಸ್ಪರ್ಧೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ನೀಡಿದ್ದರು. ಈ ಹಿನ್ನೆಲೆ ಇಬ್ಬರೊಂದಿಗೆ ಒಟ್ಟಿಗೆ ಚರ್ಚಿಸುವ ಸಲುವಾಗಿ ಹೈಕಮಾಂಡ್ ನಾಯಕರು ದಿಲ್ಲಿಗೆ ಕರೆಸಿಕೊಂಡಿದ್ದರು. ಆದರೆ, ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದ ಬಗ್ಗೆ ಇದುವರೆಗೂ ಮಾಹಿತಿ ಲಭಿಸಿಲ್ಲ.
ಸಿದ್ದರಾಮಯ್ಯ ಇಂದು ದಿಲ್ಲಿಯಲ್ಲಿದ್ದು, ಸಂಜೆ ಅಥವಾ ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ. ಇನ್ನೂ ಕೆಲ ನಾಯಕರನ್ನು ಅವರು ಈ ಅವಧಿಯಲ್ಲಿ ಭೇಟಿಯಾಗಿ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ನಿನ್ನೆ ನಿರಾಣಿ, ಇಂದು ಬೆಲ್ಲದ್: ಕಾಶಿ ವಿಶ್ವನಾಥನ ಮೊರೆ ಹೋದ ಸಿಎಂ ಸ್ಥಾನದ ಆಕಾಂಕ್ಷಿಗಳು..!