ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷ ಕೊನೆಯಾಗುತ್ತಾ ಬಂದಿದ್ದರೂ ಕಳೆದ ವರ್ಷದ 52 ಬಜೆಟ್ ಘೋಷಣೆಗಳಲ್ಲಿ ಕೆಲವಕ್ಕೆ ಆದೇಶ ಹೊರಡಿಸಿಲ್ಲ, ಇನ್ನು ಕೆಲವನ್ನು ಕೈಬಿಡಲಾಗಿದೆ. ಯಾವ ಉದ್ದೇಶಕ್ಕೆ ಈವರೆಗೆ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಈ ಬಜೆಟ್ನಲ್ಲಿ ಹೇಳಬೇಕಿತ್ತು. ಅದನ್ನೂ ಸಹ ಮಾಡಿಲ್ಲ. ಇದು ಜನಪರವಾದ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಆರ್ಥಿಕ ಶಿಸ್ತನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕಳೆದ ಬಜೆಟ್ನಲ್ಲಿ ಘೋಷಿಸಿ, ನಂತರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಆಕ್ಷನ್ ಟೇಕನ್ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆ ಕೈಬಿಡುವುದಾಗಿದ್ದರೆ ಘೋಷಣೆ ಮಾಡಿದ್ದು ಏಕೆ? ಚಾಮರಾಜನಗರದ ಜನ ತಮ್ಮ ಜಿಲ್ಲೆಗೆ ಅರಿಶಿನ ಮಾರುಕಟ್ಟೆ ಬರಲಿದೆ ಎಂಬ ಆಸೆ ಇಟ್ಟುಕೊಂಡಿದ್ದರು, ಸರ್ಕಾರ ಯೋಜನೆಯನ್ನೇ ಕೈಬಿಟ್ಟರೆ ಜನ ಏನು ಮಾಡಬೇಕು? ಯೋಜನೆ ಘೋಷಿಸಿ, ಹಣ ಒದಗಿಸಲಾಗದೆ ಅದನ್ನು ಕೈಬಿಟ್ಟು ಜನರಿಗೆ ಸರ್ಕಾರ ದ್ರೋಹ ಎಸಗಿದೆ ಎಂದು ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಆದರೆ ಪ್ರಸಕ್ತ ಸಾಲಿನ ಬಜೆಟ್ ಈ ಐದು ಸೂತ್ರಗಳಿಗೆ ತದ್ವಿರುದ್ಧವಾಗಿದೆ ಎಂದು ಹೇಳಿದರು.
ಅನುದಾನಗಳ ಬಗ್ಗೆ ಸಿದ್ದರಾಮಯ್ಯ ಮಾಹಿತಿ: ನಮ್ಮ ಸರ್ಕಾರದ ಅವಧಿಯಲ್ಲಿ ಇಲಾಖಾವಾರು ಮಾಹಿತಿ ಇತ್ತು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಬಜೆಟ್ ಪಾರದರ್ಶಕವಾಗಿರಬಾರದು ಎಂದು ವಲಯವಾರು ಬಜೆಟ್ ಶುರು ಮಾಡಿದರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಈ ಬಜೆಟ್ನಲ್ಲಿ 33,700 ಕೋಟಿ ರೂ. ಹಣ ಇಟ್ಟಿದ್ದಾರೆ. ಕಳೆದ ಸಾಲಿನಲ್ಲಿ ಯಡಿಯೂರಪ್ಪ ಅವರು ಇಟ್ಟಿದ್ದು 32,259 ಕೋಟಿ ರೂ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಈ ಬಾರಿಯ ಬಜೆಟ್ನಲ್ಲಿ 68,479 ಕೋಟಿ ರೂ. ಹಣ ಇಟ್ಟಿದ್ದಾರೆ, ಕಳೆದ ಸಾಲಿನಲ್ಲೇ 72,095 ಕೋಟಿ ರೂ. ಹಣ ನೀಡಲಾಗಿತ್ತು. ಅಂದರೆ ಈ ಬಾರಿ 3,614 ಕೋಟಿ ರೂ. ಹಣ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಯೋಜನೆಗಳಿಗೆ ಕಡಿತ ಮಾಡಲಾಗಿದೆ. ಆರ್ಥಿಕ ಅಭಿವೃದ್ಧಿ ಉತ್ತೇಜನ ವಲಯಕ್ಕೆ ಈ ಬಾರಿಯ ಬಜೆಟ್ನಲ್ಲಿ 55,657 ಕೋಟಿ ರೂ. ಹಣ ಇಟ್ಟಿದ್ದಾರೆ, ಕಳೆದ ಬಜೆಟ್ನಲ್ಲಿ 55,732 ಕೋಟಿ ರೂ. ಇಟ್ಟಿದ್ದರು. ಕಳೆದ ಬಾರಿಗಿಂತ ಈ ಬಾರಿ 75 ಕೋಟಿ ರೂ. ಕಡಿಮೆ ಆಗಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ಈ ಬಜೆಟ್ನಲ್ಲಿ 8,409 ಕೋಟಿ ರೂ. ಇಡಲಾಗಿದೆ. ಕಳೆದ ಬಜೆಟ್ನಲ್ಲಿ 8,772 ಕೋಟಿ ರೂ. ಇಟ್ಟಿದ್ದು, ಕಳೆದ ಬಾರಿಗಿಂತ ಈ ಬಾರಿ 363 ಕೋಟಿ ರೂ. ಕಡಿಮೆ ಆಗಿದೆ. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ಈ ಬಜೆಟ್ನಲ್ಲಿ 3,012 ಕೋಟಿ ರೂ., ಕಳೆದ ಬಜೆಟ್ನಲ್ಲಿ 4,552 ಕೋಟಿ ರೂ. ಮೀಸಲಿಟ್ಟಿದ್ದರು. ಇದರಲ್ಲಿ ಈ ಬಾರಿ 1,540 ಕೋಟಿ ರೂ. ಅನುದಾನ ಕಡಿಮೆ ಆಗಿದೆ. ಸಂಸ್ಕೃತಿ, ಪರಂಪರೆಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವವರು ನೀಡಿರುವ ಅನುದಾನವೇ ಅವರಿಗೆ ಸಂಸ್ಕೃತಿಯ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಡ್ಡಿ ಸಂದಾಯ, ಸಾಲ ಮರುಪಾವತಿ ಸೇರಿದರೆ 43,000 ಕೋಟಿ ರೂ. ಆಗುತ್ತದೆ. ಇದು ಬಜೆಟ್ನ ಶೇ.17 ರಷ್ಟು ಆಗುತ್ತದೆ. ಇಷ್ಟು ಅನುದಾನ ಯಾವ ಇಲಾಖೆಗೂ ಇಟ್ಟಿಲ್ಲ. ಈ ಎಲ್ಲಾ ವಲಯಗಳನ್ನು ಸೇರಿಸಿದರೆ ಒಟ್ಟು 2,69,540 ಕೋಟಿ ರೂ. ಆಗುತ್ತದೆ. ಸರ್ಕಾರ ಈ ಸಾಲಿನಲ್ಲಿ 2,65,720 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿದೆ. ಅಂದರೆ 3,820 ಕೋಟಿ ರೂ. ಹೆಚ್ಚುವರಿ ಅನುದಾನ ತೋರಿಸಲಾಗಿದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚಲು ಹೆಚ್ಚು ಅನುದಾನ ಖರ್ಚು ಮಾಡುತ್ತೇವೆ ಎಂದು ತೋರಿಸುತ್ತಿದೆ. ನಾನು ಮುಖ್ಯಮಂತ್ರಿ ಆಗಿ 2018ರ ಫೆ.2 ರಂದು ಕೊನೆ ಬಜೆಟ್ ಮಂಡಿಸಿದ್ದೆ. ಬಜೆಟ್ ಗಾತ್ರ 2,02,200 ಕೋಟಿ ರೂ. ಆಗಿತ್ತು. ಈಗಿನ ಬಜೆಟ್ ಗಾತ್ರ 2,65,720 ಕೋಟಿ ರೂ., ನಾನು ನೀರಾವರಿ ಇಲಾಖೆಗೆ ನೀಡಿದ ಅನುದಾನ 18,112 ಕೋಟಿ ರೂ., 2021-22 ರಲ್ಲಿ ನೀರಾವರಿಗೆ ನೀಡಿದ ಅನುದಾನ 21,180 ಕೋಟಿ ರೂ., ಈಗಿನ ಬಜೆಟ್ನಲ್ಲಿ 20,660 ಕೋಟಿ ರೂ. ನಮ್ಮ ಸರ್ಕಾರದ ಬಜೆಟ್ಗೂ, ಈಗಿನ ಬಜೆಟ್ಗೂ ಇರುವ ವ್ಯತ್ಯಾಸ 2,400 ಕೋಟಿ ರೂ. ಇಲಾಖೆಗೆ ನೀಡುವ ಅನುದಾನದಲ್ಲಿ ಶೇ.31 ಬೆಳವಣಿಗೆ ದರ ಇರಬೇಕಿತ್ತು, ಅದು ಕಾಣುತ್ತಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿಗೆ 2018-19 ರ ಬಜೆಟ್ನಲ್ಲಿ 14,268 ಕೋಟಿ ರೂ. ಅನುದಾನ ನೀಡಿದ್ದೆ, ಕಳೆದ ಬಜೆಟ್ನಲ್ಲಿ ರೂ. 16,036 ಕೋಟಿ ನೀಡಿದ್ದರು, ಈಗ 17,325 ಕೋಟಿ ರೂ. ಅನುದಾನ ಇಟ್ಟಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ 2018-19 ರ ಬಜೆಟ್ನಲ್ಲಿ 17,196 ಕೋಟಿ ರೂ., ಈ ಬಜೆಟ್ನಲ್ಲಿ 16,076 ಕೋಟಿ ರೂ. ನೀಡಿದ್ದಾರೆ. ನಾಲ್ಕು ವರ್ಷದ ನಂತರ ಈ ಇಲಾಖೆಗೆ 1,120 ಕೋಟಿ ರೂ. ಅನುದಾನ ಕಡಿಮೆ ಆಗಿದೆ ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆಗೆ 2018-19 ರ ಬಜೆಟ್ನಲ್ಲಿ 9,271 ಕೋಟಿ ರೂ. ಅನುದಾನ ನೀಡಿದ್ದೆವು. ಈ ಬಜೆಟ್ನಲ್ಲಿ 10,477 ಕೋಟಿ ರೂ. ನೀಡಲಾಗಿದೆ. ವಸತಿ ಯೋಜನೆಗಳಿಗೆ 2018-19 ರ ಬಜೆಟ್ನಲ್ಲಿ 3,942 ಕೋಟಿ ರೂ. ನೀಡಿದ್ದೆವು, ಈ ಬಜೆಟ್ನಲ್ಲಿ 3,594 ಕೋಟಿ ರೂ. ನೀಡಿ 348 ಕೋಟಿ ರೂ. ಕಡಿಮೆ ಮಾಡಿದ್ದಾರೆ. ಈ ರೀತಿ ಅನುದಾನ ಪ್ರಮಾಣ ನಾಲ್ಕು ವರ್ಷಗಳ ಹಿಂದೆ ನಮ್ಮ ಸರ್ಕಾರ ನೀಡಿದ್ದಕ್ಕಿಂತ ಈಗ ಕಡಿಮೆಯಾಗಲು ಕೇಂದ್ರ ಸರ್ಕಾರ ತೆರಿಗೆಯಲ್ಲಿ ನಮ್ಮ ಪಾಲನ್ನು ಸರಿಯಾಗಿ ನೀಡದಿರುವುದು, 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಾಗಿರುವುದು ಮತ್ತು ಬಹಳ ಮುಖ್ಯವಾಗಿ ರಾಜ್ಯ ಸರ್ಕಾರ ಕಳೆದ ಮೂರೇ ವರ್ಷಗಳಲ್ಲಿ 2,64,000 ಕೋಟಿ ರೂ. ಸಾಲ ಮಾಡಿ ಬಡ್ಡಿ ಮತ್ತು ಅಸಲಿನ ಮರುಪಾವತಿಗೆ ಬಜೆಟ್ನ ಬಹುಪಾಲು ಹಣ ಖರ್ಚಾಗುತ್ತಿದೆ ಎಂದು ದೂರಿದರು.