ಬೆಂಗಳೂರು: ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಶೂಟೌಟ್ ನಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೊಲೆ ಆರೋಪಿ ಪ್ರಭು ಗುಂಡೇಟು ತಿಂದವ. ಬೆಂಗಳೂರು ಹೊರವಲಯದ ಸಿಡೇದಹಳ್ಳಿಯಲ್ಲಿ ಮೇ 4ರಂದು ಹಾಡಹಗಲೇ ನಡುರಸ್ತೆಯಲ್ಲೇ ರೌಡಿಶೀಟರ್ ಕರಣ್ ಸಿಂಗ್ ಎಂಬಾತನನ್ನು ಹತ್ಯೆ ಮಾಡಿದ್ದ. ಹೀಗಾಗಿ ಆರೋಪಿ ಅವಿತುಕೊಂಡಿರುವ ಜಾಗದ ಮಾಹಿತಿ ತಿಳಿದು ಬಾಗಲಗುಂಟೆ ಠಾಣಾ ಪಿಎಸ್ಐ ಶ್ರೀಕಂಠೇಗೌಡ ಹಾಗೂ ತಂಡ ತೆರಳಿದ್ದಾರೆ. ಈ ವೇಳೆ ಆರೋಪಿ, ಕಾನ್ಸ್ಟೇಬಲ್ ಹಾಗೂ ಪಿಎಸ್ಐ ಶ್ರೀಕಂಠೇಗೌಡ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪಿಎಸ್ಐ ಸೂಚನೆ ನೀಡಿದ್ದಾರೆ. ಈ ವೇಳೆ ಆರೋಪಿ ಕೇಳದ ಕಾರಣ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಕಾನ್ಸ್ಟೇಬಲ್ಗೂ ಗಾಯಗಳಾಗಿವೆ.
ಸದ್ಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ. ಆರೋಪಿ ಹಾಗೂ ಗಾಯಾಳು ಕಾನ್ಸ್ಟೇಬಲ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
2017ರಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಕೊಲೆಯಾದ ಕರಣ್ ಸಿಂಗ್ ಹಾಗೂ ಕೊಲೆ ಆರೋಪಿ ಪ್ರಭು ಬಾಗಲಗುಂಟೆ ಪೊಲೀಸ್ ಠಾಣೆಗೆ ಬೇಕಾಗಿದ್ದ ರೌಡಿಶೀಟರ್ಗಳು. ಈ ಆರೋಪಿಗಳು ತಮ್ಮದೇ ರೌಡಿ ಗ್ಯಾಂಗ್ ಕಟ್ಟೋ ವಿಚಾರವಾಗಿ ಮಾತುಕತೆ ನಡೆಸ್ತಿದ್ದರು. ಈ ವೇಳೆ ಕರಣ್ ಸಿಂಗ್, ಪ್ರಭು ಮಾತು ಕೇಳದೆ ಮೊಬೈಲ್ ನೋಡ್ತಿದ್ದ. ನಂತರ ಇಬ್ಬರು ಎಣ್ಣೆ ನಶೆಯಲ್ಲಿದ್ದ ಕಾರಣ ಮಾತಿಗೆ ಮಾತು ಬೆಳೆದು ಪ್ರಭು ಚಾಕು ಇರಿದಿದ್ದಾನೆ. ಚಾಕುವಿನಿಂದ ಇರಿಯುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿತ್ತು.