ಬೆಂಗಳೂರು: ಆಟೋ ಚಾಲಕ ರಘು ಎಂಬುನ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಬಾಬು ಶಿವಕುಮಾರ್ ಮೇಲೆ ಗುಂಡು ಹಾರಿಸಲಾಗಿದೆ. ಇದೇ ತಿಂಗಳ 11ರಂದು ರಘು ಎಂಬ ಆಟೋ ಚಾಲಕನ ಕೊಲೆಯಾಗಿತ್ತು. ರಘುನನ್ನು ಕೊಲೆ ಮಾಡಲು ಆತನ ಮಾವ ಪ್ರಭಾಕರ್ ಎಂಬಾತ ಆರೋಪಿಗೆ ಸುಪಾರಿ ಕೊಟ್ಟಿದ್ದ ಎನ್ನಲಾಗ್ತಿದೆ. ಬಳಿಕ ಲಗ್ಗೆರೆ ಸೇತುವೆ ಬಳಿ ರಘುನನ್ನು ಕೊಲೆಗೈದಿದ್ದರು.
ರಘುನನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಸೆರೆಯಾಗಿತ್ತು. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಆಧಾರದ ಮೇಲೆ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ನಡೆಸಲು ಮುಂದಾಗಿದ್ದ. ಹೀಗಾಗಿ ಆತ್ಮ ರಕ್ಷಣೆಗಾಗಿ ಪಿಎಸ್ಐ ವೆಂಕಟರಾಮು ಅವರು ಗುಂಡು ಹಾರಿಸಿದ್ದಾರೆ.
ವೃತ್ತಿಯಲ್ಲಿ ಚಾಲಕನಾಗಿ ಜೀವನ ನಡೆಸುತ್ತಿದ್ದ ರಘು ಹಾಗೂ ಆತನ ಮಾವ ಪ್ರಭಾಕರ್ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚೆನ್ನೈನಲ್ಲಿರುವ ತನ್ನ ಸ್ನೇಹಿತನಿಗೆ ಪ್ರಭಾಕರ್ ₹ 50 ಸಾವಿರ ಹಣ ನೀಡಿ ರಘು ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗ್ತಿದೆ.
ರಘು ಕೊಲೆ ಮಾಡಲಿಕ್ಕೆ ಸುಪಾರಿ ಪಡೆದಿದ್ದರ ಬಗ್ಗೆ ಮಾಹಿತಿ ಬಿಚ್ಚಿಟ್ಟ ಆರೋಪಿ ಶಿವಕುಮಾರ್, ₹ 50 ಸಾವಿರ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.