ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಉದ್ಯಮಿ ಮನೋಜ್, ಕರವೇಯಲ್ಲಿ ಗುರ್ತಿಸಿಕೊಂಡಿದ್ದ ಆದರ್ಶ್ ಹಾಗೂ ಮತ್ತೊಬ್ಬನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?
ಕಳೆದ ಎರಡು ದಿನಗಳ ಉದ್ಯಮಿ ಮನೋಜ್ ಜೊತೆ ಆತನ ತಮ್ಮ ಹಾಗೂ ಸ್ನೇಹಿತರು ರಾಜಾಜಿನಗರದ ಬಾಶಂ ಸರ್ಕಲ್ ಬಳಿಯಿರುವ ಎಸ್ವಿ ಬಾರ್ಗೆ ತೆರಳಿದ್ದರು. ಇದೇ ವೇಳೆ ಆದರ್ಶ್ ಹಾಗೂ ಆತನ ಗ್ಯಾಂಗ್ ಸಹ ಅಲ್ಲಿಯೇ ಇತ್ತು. ಆದರ್ಶ್, ಮನೋಜ್ನನ್ನು ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಬಾರ್ನಿಂದ ಹೊರ ಬಂದು ಏಕಾಏಕಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಉದ್ಯಮಿ ಮನೋಜ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ತಿಳಿದುಬಂದಿದೆ. ತಕ್ಷಣ ಸ್ಥಳದಲ್ಲಿದ್ದವರೆಲ್ಲಾ ಎಸ್ಕೇಪ್ ಆಗಿದ್ರು.
ಘಟನೆ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳಾ ಮನೋಜ್, ಆದರ್ಶ್ ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ. ತಲೆಮೆರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಉದ್ಯಮಿ ಮನೋಜ್ ಲೈಸನ್ಸ್ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಹೊರವಲಯದಲ್ಲಿ ಆತನ ಫಾರ್ಮ್ ಹೌಸ್ ಇದ್ದು, ಸೇಫ್ಟಿಗಾಗಿ ರಿವಾಲ್ವರ್ ಇಟ್ಟುಕೊಂಡಿದ್ದಾಗಿ ಹೇಳಿದ್ದಾನೆ. ಇನ್ನೂ ಆರೋಪಿ ಆದರ್ಶ್ ವಿರುದ್ಧ ಈ ಹಿಂದೆ ಕೆಲವೊಂದು ಆರೋಪಗಳು ಕೇಳಿಬಂದಿದ್ದವು. ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯಲ್ಲಿ ಆದರ್ಶ್ ಗುರುತಿಸಿಕೊಂಡಿದ್ದ ಎನ್ನಲಾಗಿದೆ.