ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ತವರು ಜಿಲ್ಲೆ ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ತೆಕ್ಕೆಯಿಂದ ಮರಳಿ ಸ್ಥಾನವನ್ನು ದಕ್ಕಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮುಂದಾಗಿದ್ದಾರೆ.
ಉಪ ಸಮರದಲ್ಲಿ ಸಿಎಂ ತವರಿನ ಸೋಲು ಪರಿಷತ್ ಚುನಾವಣೆಯಲ್ಲಿ ಮಾಜಿ ಸಿಎಂ ತವರಿನಲ್ಲಿ ಅಗಬಾರದು ಎನ್ನುವ ಕಾರಣಕ್ಕೆ ಆದ್ಯತೆ ಮೇಲೆ ಬಿಎಸ್ವೈ ಪ್ರಚಾರದ ಕಣಕ್ಕಿಳಿದಿದ್ದಾರೆ.
ಯಡಿಯೂರಪ್ಪ ಪರಿಷತ್ ಚುನಾವಣಾ ಪ್ರಚಾರ : ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚುನಾವಣಾ ಪ್ರಚಾರಕ್ಕೂ ಕೊಡದಷ್ಟು ಸಮಯ ಮತ್ತು ಪ್ರಾಮುಖ್ಯತೆಯನ್ನು ಶಿವಮೊಗ್ಗದ ಪರಿಷತ್ ಕ್ಷೇತ್ರಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ಸ್ವತಃ ತಮ್ಮದೇ ಪ್ರಚಾರಕ್ಕೂ ನಿರಂತರ 6 ದಿನಗಳ ಕಾಲ ಒಂದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಉದಾಹರಣೆ ಇತ್ತೀಚಿನ ವರ್ಷಗಳಲ್ಲಿ ಕಾಣುವುದಿಲ್ಲ. ಆದರೆ ಶಿವಮೊಗ್ಗ ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಸತತವಾಗಿ ಪ್ರಚಾರ ಕಾರ್ಯ ನಡೆಸಿ ಗಮನ ಸೆಳೆದಿದ್ದಾರೆ.
ದಿನಕ್ಕೆರಡು ಸಮಾವೇಶದಲ್ಲಿ ಭಾಗಿಯಾಗಿರುವ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಚನ್ನಗಿರಿ, ಸಂತೆಬೆನ್ನೂರು, ಶಿಕಾರಿಪುರ, ಶಿರಾಳಕೊಪ್ಪ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಸೊರಬ, ಹೊನ್ನಾಳಿಯಲ್ಲಿ ನಡೆದ ಸಮಾವೇಶಗಳಲ್ಲಿ ಪಾಲ್ಗೊಂಡು ಅವಿರತವಾಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ.
ಶಿವಮೊಗ್ಗ ಕ್ಷೇತ್ರ ಅಷ್ಟು ಮುಖ್ಯವೇಕೆ..? : ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಆರು ಬಾರಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಲೇ ಬಂದಿದ್ದ ಶಂಕರಮೂರ್ತಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಆ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಶಂಕರಮೂರ್ತಿ ಪುತ್ರನಿಗೆ ಟಿಕೆಟ್ ತಪ್ಪಿತ್ತು. ಈಗ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಚುನಾವಣೆಗೆ ಟಿಕೆಟ್ ಸಿಕ್ಕಿದೆ ಹಾಗಾಗಿ ಶಂಕರಮೂರ್ತಿ ಪುತ್ರನನ್ನು ಗೆಲ್ಲಿಸಿಕೊಳ್ಳುವುದು ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿದೆ.
ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಹಾಗೂ ಶಂಕರಮೂರ್ತಿ ಹೆಜ್ಜೆಗೆ ಹೆಜ್ಜೆ ಹಾಕಿ ಬೆಳೆದು ಬಂದವರು. ಯಡಿಯೂರಪ್ಪ ಪುತ್ರ ಜಿಲ್ಲೆಯ ಸಂಸದರಾಗಿದ್ದಾರೆ. ಹೀಗಾಗಿ ಜಿಲ್ಲೆಯಿಂದ ಪರಿಷತ್ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಶಂಕರಮೂರ್ತಿ ಪುತ್ರ ಪರಾಜಿತನಾದಲ್ಲಿ ಅದು ನಕಾರಾತ್ಮಕ ಸಂದೇಶ ಬೀರಲಿದೆ.
ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿಯೂ ತಮ್ಮ ಹೆಸರಿಗೆ ಕಪ್ಪುಚುಕ್ಕೆಯಾಗಲಿದೆ ಎನ್ನುವ ಆತಂಕ ಯಡಿಯೂರಪ್ಪ ಅವರಿಗೆ ಎದುರಾಗಿದೆ ಹಾಗಾಗಿ ಹೆಚ್ಚಿನ ಆಸಕ್ತಿಯಿಂದ ಜಿಲ್ಲಾ ಪ್ರವಾಸ ಮಾಡಿ ಪ್ರಚಾರ ಕಾರ್ಯ ನಡೆಸಿದ್ದಾರೆ.
ಹಾನಗಲ್ ಸೋಲಿನ ಪಾಠ: ಆರಂಭದಿಂದ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ ಹಾನಗಲ್ ಕ್ಷೇತ್ರದಲ್ಲಿ ಹಿನ್ನಡೆಯಾಗಲಿದೆ ಎಂದು ತಿಳಿಯುತ್ತಿದ್ದಂತೆ ಕಡೆ ಕ್ಷಣದಲ್ಲಿ ತವರು ಜಿಲ್ಲೆಯಲ್ಲೇ ಬೀಡು ಬಿಟ್ಟು ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಆದರೂ ಪಕ್ಷ ಅಲ್ಲಿ ಸೋತಿತು.
ಅಲ್ಲದೇ ತವರು ಜಿಲ್ಲೆಯಲ್ಲಿಯೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಾಗಲಿಲ್ಲ ಎನ್ನುವ ಆಪಾದನೆ ಜೊತೆಗೆ ನಾಯಕತ್ವವನ್ನೂ ಪ್ರಶ್ನಿಸುವಂತಹ ಹೇಳಿಕೆಗಳು ಕೇಳಿಬಂದವು.
ಇದರಿಂದ ಸ್ವತಃ ಮುಖ್ಯಮಂತ್ರಿ ಮುಜುಗರಕ್ಕೊಳಗಾಗಬೇಕಾಯಿತು. ಅಂತಹ ಸನ್ನಿವೇಶ ಈಗ ತಮಗೆ ಎದುರಾಗಬಾರದು ತಮ್ಮ ತವರು ಜಿಲ್ಲೆಯ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಳ್ಳಲಾಗದವರು ಎಂದು ಯಡಿಯೂರಪ್ಪ ನಾಯಕತ್ವ ಪ್ರಶ್ನಿಸುವಂತಾಗಬಾರದು ಎಂದು ತವರಿನಲ್ಲೇ ಬೀಡುಬಿಟ್ಟು ಪ್ರಚಾರ ಕಾರ್ಯ ನಡೆಸಿದ್ದಾರೆ.
ಕಾಂಗ್ರೆಸ್ ಭದ್ರಕೋಟೆ ವಶ : ಈ ಹಿಂದೆ ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಜಿಲ್ಲೆಯ ಹೆಚ್ಚಿನ ಸಂಖ್ಯೆ ಶಾಸಕರು, ಪರಿಷತ್ ಸ್ಥಾನ ಮತ್ತು ಸಂಸತ್ ಸದಸ್ಯ ಸ್ಥಾನ ಕೂಡ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಆದರೆ. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಬಂಗಾರಪ್ಪ ಕಾಂಗ್ರೆಸ್ ತೊರೆದ ನಂತರ ಜಿಲ್ಲೆಯಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿತವಾಗಿದ್ದು, ಹೆಚ್ಚಿನ ಶಾಸಕರು, ಪರಿಷತ್ ಸ್ಥಾನ, ಸಂಸತ್ ಸ್ಥಾನ ಬಿಜೆಪಿಗೆ ಲಭಿಸಿತ್ತು.
ಆದರೆ, ಯಡಿಯೂರಪ್ಪ ಬಿಜೆಪಿ ತೊರೆದ ನಂತರ ಜಿಲ್ಲೆಯ ಪರಿಷತ್ ಸ್ಥಾನ ಬಿಜೆಪಿಯಿಂದ ಕಾಂಗ್ರೆಸ್ ಪಾಲಾಗಿದ್ದು, ಅದನ್ನು ಮತ್ತೆ ಪಕ್ಷದ ತೆಕ್ಕೆಗೆ ತರಬೇಕು ಎಂದು ಯಡಿಯೂರಪ್ಪ ಪಣ ತೊಟ್ಟಿದ್ದಾರೆ. ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಲು ಹೊರಟಿದ್ದಾರೆ. ಹಾಗಾಗಿ ಈ ಬಾರಿ ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ತವರಿನಲ್ಲೇ ಬೀಡು ಬಿಟ್ಟಿದ್ದು, ಆದ್ಯತೆಯಂತೆ ಪರಿಗಣಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ.