ಬೆಂಗಳೂರು: ಅಧಿಕಾರಕ್ಕೆ ಬಂದಾಗ ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಲ್ಲವೆಂದಿದ್ದರು. ಆದರೆ, ಜೆಡಿಎಸ್, ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಕಾಮಗಾರಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರಕ್ಕೆ ಮಾತ್ರ ಮುಖ್ಯಮಂತ್ರಿಗಳ ಬಳಿ ಹಣವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಇದೇ ರೀತಿ ಮುಂದುವರಿದರೆ ರಾಜಕೀಯ ಹೋರಾಟ ಮಾಡುತ್ತೇವೆ ಹೆದರಿಕೊಂಡು ಮನೆಯಲ್ಲಿ ಕೂರಲ್ಲ ಎಂದು ಎಚ್ಚರಿಕೆ ನೀಡಿದರು. ಅನುದಾನವಿಲ್ಲವೆಂದು ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ತಟಸ್ಥಗೊಳಿಸಿದ್ದಾರೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ದಿಗೆ 220 ಕೋಟಿ ನೀಡಿದ್ದಾರೆ. ಶಿಕಾರಿಪುರ ಒಂದಕ್ಕೆ 3 ಸಾವಿರ ಕೋಟಿ ನೀಡಿದ್ದಾರೆ.
ಹಾಸನಕ್ಕೆ ಇರದಿದ್ದ ಅನುದಾನ ಇಲ್ಲಿಗೆ ಹೇಗೆ ಬಂತು? ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು? ಇಷ್ಟೇ ಅಲ್ಲ, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳೂ ನಡೆಯುತ್ತಿಲ್ಲ. ಅಲ್ಲಿಯೂ ಅನುದಾನವನ್ನು ಕಡಿತಗೊಳಿಸಿದ್ದಾರೆ ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದ ಮೊಸಳೆಹೊಸಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಗೆ ಇಂಡಿಯನ್ ಟೆಕ್ನಿಕಲ್ ಕೌನ್ಸಿಲ್ ಅನುಮತಿ ನೀಡಿದೆ. 50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಸಂಯೋಜನೆಯ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿದೆ. ಕಾಲೇಜಿನಲ್ಲಿ 174 ಮಂದಿ ಬಡ ವಿದ್ಯಾರ್ಥಿಗಳಿದ್ದಾರೆ. ಆದರೆ ದುರುದ್ದೇಶಪೂರಕವಾಗಿ ಸಂಯೋಜನೆ ತಿರಸ್ಕರಿಸಿದ್ದಾರೆ.
ಡಿಸಿಎಂ ಅಶ್ವಥ್ ನಾರಾಯಣ ಅವರು ಕಾಲೇಜು ಮಾನ್ಯತೆ ರದ್ದುಪಡಿಸಿ, ಆ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. ರಾಜ್ಯದ 30 ಸರ್ಕಾರಿ ಪಾಲಿಟೆಕ್ನಿಕ್ ಮುಚ್ಚಲು ಹೊರಟಿದ್ದಾರೆ. ಹಾಸನದ ಸರ್ಕಾರಿ ಪಾಲಿಟೆಕ್ನಿಕ್ ಕೂಡ ಮುಚ್ಚುತ್ತಿದ್ದಾರೆ. ಶಿಕ್ಷಣದಲ್ಲೂ ಸರ್ಕಾರ ರಾಜಕೀಯ ಮಾಡಲು ಹೊರಟಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.