ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ನಾಳೆಯೂ ಪ್ರತಿಭಟನೆ ಮಾಡಲು ನಿರ್ಧರಿಸಿದ್ದು, ಇಂದು ನಗರದ ವಿವಿಧ ಛತ್ರಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರು ತಂಗಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಬರೋಬ್ಬರಿ 19 ಬೇಡಿಕೆಗಳನಿಟ್ಟು 2021-22ರ ಬಜೆಟ್ನಲ್ಲಿ ಕಡಿತವಾಗಿರುವ 1,400 ಕೋಟಿ ರೂ. ಅನುದಾನ ವಾಪಸ್ ಕೊಡಬೇಕು ಹಾಗೂ ಅನುದಾನ ಹೆಚ್ಚಿಸಬೇಕು. ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಪಡಿಸಿ, ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
ಪ್ರತಿಭಟನಾ ಸ್ಥಳಕ್ಕಾಗಮಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕಳೆದ ಒಂದು ವರ್ಷದಿಂದ ಕೋವಿಡ್ ಹಿನ್ನಲೆ ರಾಜ್ಯದ ಆದಾಯ ಕಡಿಮೆ ಆಗಿದೆ. ಆದರೂ ನಮ್ಮ ಇಲಾಖೆಗೆ ಬೇಕಾದ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದೆ ಇಟ್ಟಿದ್ದೇವೆ. ಸೋಮವಾರದ ಬಜೆಟ್ನಲ್ಲಿ ಈ ಬಗ್ಗೆ ತಿಳಿಯಲಿದೆ. 19 ಬೇಡಿಕೆಗಳ ಬಗ್ಗೆ ಬಜೆಟ್ ಬಳಿಕ ನಮ್ಮ ಆಯುಕ್ತರು ಸಂಘಟನೆಯ ಮುಖಂಡರ ಜೊತೆ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುರೇಶ್ ಕುಮಾರ್ ಹೇಳಿದರು.
ಬಳಿಕ ಮಾತಾನಾಡಿದ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಇದೇ ತಿಂಗಳು 10 ರಂದು ಬಿಸಿಯೂಟ ಕಾರ್ಯಕರ್ತೆಯರ ಜೊತೆ ಸಭೆ ಕರೆಯಲಾಗಿದೆ. ನಾವು ತಕ್ಷಣ ಈಡೇರಿಸಬಹುದಾದ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಇತರೆ ಬೇಡಿಕೆಗಳ ಬಗ್ಗೆ ಕೂಡ ಗಮನ ಹರಿಸಲಾಗತ್ತದೆ ಎಂದರು.
ಸಂಜೆ ಆಗುತ್ತಿದ್ದಂತೆ ಬಿಸಿಯೂಟ ಕಾರ್ಯಕರ್ತೆಯರನ್ನು ಛತ್ರಗಳಿಗೆ ಶಿಫ್ಟ್ ಮಾಡಲಾಯ್ತು. ಚಳಿಯಲ್ಲಿ, ಗಲೀಜಾಗಿರುವ ರಸ್ತೆಯಲ್ಲಿ ಇರುವುದು ಬೇಡ ಎಂದು ಪೊಲೀಸರು ಒತ್ತಾಯಿಸಿ, ನಗರದ ವಿವಿಧ ಛತ್ರಗಳಲ್ಲಿ ತಂಗಲು ವ್ಯವಸ್ಥೆ ಮಾಡಿದರು. ನಾಳೆ ಮತ್ತೆ ಎಲ್ಲರೂ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕವರೆಗೆ ಬೃಹತ್ ರ‍್ಯಾಲಿ ನಡೆಸಲಿದ್ದಾರೆ.