ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತೆ ಮಹಿಳೆ ಮೇಲೆ ಪಿಪಿಇ ಕಿಟ್ ಧರಿಸಿದ್ದ ಅಪರಿಚಿತ ವೈದ್ಯನೊಬ್ಬ ಕಿರುಕುಳ ನಡೆಸಿದ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿತೆ ಮಹಿಳೆ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಆಸ್ಪತ್ರೆಯ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ರೋಹಿಣಿ ಕಟೋಚ್, ಕೊರೊನಾ ಸೋಂಕು ತಗುಲಿರುವ ಗರ್ಭಿಣಿ ಮಹಿಳೆ ವಿಕ್ಟೋರಿಯಾಗೆ ದಾಖಲಾಗಿದ್ದರು. ಮಹಿಳೆಯ ಆರೋಗ್ಯ ತಪಾಸಣೆ ವೇಳೆ ಪಿಪಿಇ ಕಿಟ್ ಧರಿಸಿದ್ದ ಅಪರಿಚಿತ ವೈದ್ಯನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸದ್ಯ, ಆ ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದೇವೆ. ಹಾಗೆಯೇ ಕ್ವಾರಂಟೈನ್ಗೆ ಒಳಗಾದ ಸಿಬ್ಬಂದಿಯನ್ನೂ ತನಿಖೆ ನಡೆಸಲಾಗುವುದು. ಆಸ್ಪತ್ರೆಗೆ ಅಪರಿಚಿತರೂ ಯಾರಾದರೂ ಭೇಟಿ ಕೊಟ್ಟು ಈ ಕೃತ್ಯ ಮಾಡಿದ್ದಾರೆಯೇ ಅಥವಾ ಆಸ್ಪತ್ರೆ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ತನಿಖೆ ನಡೆಸಲಾಗುವುದು. ಸದ್ಯ, ನಾನು ಹಾಗೂ ಮಹಿಳಾ ಪಿಎಸ್ಐಯೊಬ್ಬರು ಜವಾಬ್ದಾರಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದರು.
ಪ್ರಕರಣದ ಹಿನ್ನೆಲೆ: ಕಳೆದ 25ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಸೊಂಕಿತ ಗರ್ಭಿಣಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಹೀಗಾಗಿ ಸಂತ್ರಸ್ತೆ ಜು.30ರಂದು ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.