ಬೆಂಗಳೂರು: ನಿನ್ನೆಯಿಂದ ಸೀಲ್ಡೌನ್ ಆಗಿರುವ ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್ಗೆ ಮೇಯರ್ ಗೌತಮ್ ಕುಮಾರ್ ಹಾಗೂ ಶಾಸಕ ಜಮೀರ್ ಅಹ್ಮದ್ ತಂಡ ಭೇಟಿ ನೀಡಿ, ವಾರ್ಡ್ನ ಜನರ ಸ್ಥಿತಿಗತಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಯಾವುದೇ ಮನೆಯನ್ನ ಸೀಲ್ ಮಾಡಿಲ್ಲ. ಒಂದು ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ, ಯಾರೂ ಹೊರಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ ಅಷ್ಟೆ. ಸೀಲ್ಡೌನ್ ವಾರ್ಡ್ಗಳಲ್ಲಿ ಏಳು ಪಾಸಿಟಿವ್ ಕೇಸ್ಗಳು ಸಿಕ್ಕಿವೆ. ಹಾಗಾಗಿ ಬೇರೆ ಕಡೆಗೆ ಸೋಂಕು ಸ್ಪ್ರೆಡ್ ಆಗಬಾರದು. ಅದಕ್ಕಾಗಿ ಸಂಪೂರ್ಣ ಲಾಕ್ಡೌನ್ ಹೇರಲಾಗಿದೆ. ಪ್ರತಿ ಮನೆಗೂ ವೈದ್ಯರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು.
ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ ಮಾತನಾಡಿ, ಸೀಲ್ಡೌನ್ನಿಂದ ಜನ ಪ್ಯಾನಿಕ್ ಆಗಿ ಬೆಳಗ್ಗೆ ಎಲ್ಲರೂ ದಿನಸಿ, ಹಾಲು ಕೊಳ್ಳಲು ಹೊರಗೆ ಬಂದ್ರು. ಹಂತ ಹಂತವಾಗಿ ಎಲ್ಲವೂ ಸರಿ ಹೋಗಲಿದೆ ಎಂದರು. ಇನ್ನು, ಬಾಪೂಜಿನಗರದ ಹೊಸಗುಡದಹಳ್ಳಿಗೆ ಬಿಬಿಎಂಪಿ ದಕ್ಷಿಣ ಜಂಟಿ ಆಯುಕ್ತ ವೀರಭದ್ರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಬಿಬಿಎಂಪಿ ದಕ್ಷಿಣ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಬಾಪೂಜಿನಗರದಲ್ಲಿ ಎರಡು ಪಾಸಿಟಿವ್ ಕೇಸ್ ದಾಖಲಾಗಿದೆ. ಗಂಡ-ಹೆಂಡತಿ ಗುಜರಾತ್ನಿಂದ ಡೆಲ್ಲಿಗೆ ಹೋಗಿ ಬಂದಿದ್ರು. ಅವರಿಗೆ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ಆದ್ರೆ ಅವರನ್ನ ಚೆಕ್ ಮಾಡಿದಾಗ ಪಾಸಿಟಿವ್ ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಸರ್ಬವಾಲ ರೆಸಿಡೆನ್ಸಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಅವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಬಿಎಂಎಸ್ ಹಾಗೂ ಕಿಮ್ಸ್ನಿಂದ ಮೂವತ್ತು ಟೀಂ ಕರೆಸಲಾಗಿದೆ ಎಂದರು.