ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಎಸಗಿರುವುದನ್ನು ಖಂಡಿಸಿ ಹಿರಿಯ ವಕೀಲರು ಮೇ.30ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಖ್ಯಾತ ಹಿರಿಯ ವಕೀಲರಾದ ಸಿ.ಹೆಚ್.ಹನುಮಂತರಾಯ, ಡಾ.ಸಿ.ಎಸ್.ದ್ವಾರಕಾನಾಥ್, ಎಸ್.ಶಂಕರಪ್ಪ, ಎ.ಎಸ್.ಪೊನ್ನಣ್ಣ, ಬಾಲನ್, ಪ್ರೊ. ಹರಿರಾಮ್, ಕೋಟೇಶ್ವರ್ ರಾವ್, ಎನ್.ಶಿವಕುಮಾರ್, ಟಿ.ಜಿ.ರವಿ, ಗಂಗಾಧರಯ್ಯ, ಕೆ.ಬಿ.ಕೆ ಸ್ವಾಮಿ, ಜೆ.ಡಿ ಕಾಶಿನಾಥ್, ಕೆ.ಎನ್.ಜಗದೀಶ್ ಕುಮಾರ್, ಸೂರ್ಯ ಮುಕುಂದರಾಜ್ ಸೇರಿದಂತೆ ಹಲವು ವಕೀಲರು ಬೆಂಗಳೂರಿನ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ನಾಡಗೀತೆ ಮತ್ತು ಕುವೆಂಪು ಅವರನ್ನು ಅವಮಾನಿಸಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಲು ಹಾಗೂ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನು ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ, ಪಠ್ಯಗಳಲ್ಲಿ ಶ್ರೇಷ್ಠತೆ ವ್ಯಸನದ ಭಯೋತ್ಪಾದನೆಯನ್ನು ವಿರೋಧಿಸಲು ಹಾಗೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನೆಯಲ್ಲಿ ನಾಡಿನ ಹಿರಿಯ ನ್ಯಾಯವಾದಿಗಳು, ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗಿಯಾಗಲಿದ್ದಾರೆ ಎಂದರು.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುಗೆ ಅಪಮಾನ ಆರೋಪ: ರೋಹಿತ್ ಚಕ್ರತೀರ್ಥ, ಲಕ್ಷಣ್ ವಿರುದ್ಧ ದೂರು