ಬೆಂಗಳೂರು: ರಾಜ್ಯವು ಸಮರ್ಥವಾದ ಇ.ಎಸ್.ಡಿ.ಎಂ ನೀತಿಯನ್ನು ಈಗಾಗಲೇ ಜಾರಿಗೆ ತಂದಿದ್ದು, ಸೆಮಿಕಂಡಕ್ಟರ್ ಉದ್ದಿಮೆಗಳಿಗೆ ಅಗತ್ಯ ಬಿದ್ದರೆ ಹೆಚ್ಚಿನ ಭೂಮಿ ಒದಗಿಸಲು ಸಿದ್ಧ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರಪ್ರಥಮ 'ಸೆಮಿಕಾನ್ ಇಂಡಿಯಾ' ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡುತ್ತಿದೆ. ರಾಜ್ಯವು ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದು, ವಿದ್ಯುನ್ಮಾನ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ ಡಿಸೈನ್ ವಲಯದಲ್ಲಿ ಶೇ.40ರಷ್ಟು ಕಂಪನಿಗಳು ಬೆಂಗಳೂರಿನಲ್ಲಿ ಇರುವುದಾಗಿ ಇದೇ ವೇಳೆ ಹೇಳಿದರು.
ಕೇಂದ್ರ ಸರಕಾರವು ಈ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವ ಮೂಲಕ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಸರಕಾರವು ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಉದ್ದಿಮೆಗಳಿಗೆ ನೀಡುತ್ತಿರುವ ನೆರವಿನ ವ್ಯವಸ್ಥೆ ಬೇರೆಲ್ಲೂ ಇಲ್ಲ ಎಂದು ಇದೇ ವೇಳೆ ಹೇಳಿದ್ದಾರೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ವ್ಯಾಪಕ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಉದ್ದಿಮೆಗಳಿಗೆ ನುರಿತ ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ಒದಗಿಸಲು ಯಾವುದೇ ಅಡೆತಡೆಗಳು ಇಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಸಾಧಿಸಲು ಓಟದ ಸ್ಪರ್ಧೆಯಲ್ಲ, ಮ್ಯಾರಥಾನ್ ನಡೆಸಬೇಕು: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ : ಭಾರತವು ಹೊಂದಿರುವ ಅತಿದೊಡ್ಡ ಆಸ್ತಿಯೆಂದರೆ ಅದು ಪ್ರತಿಭಾನ್ವಿತ ಕಾರ್ಯಪಡೆ. ಇಡೀ ವಿಶ್ವವೇ ಅದರ ಮೇಲೆ ವಿಶ್ವಾಸವಿರಿಸಿದೆ. ಭಾರತವನ್ನು ಚಿಪ್ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಪ್ರಮುಖ ದೇಶವನ್ನಾಗಿ ಮಾಡುವುದೆಂದರೆ, ಅದೊಂದು ಓಟದ ಸ್ಪರ್ಧೆಯಲ್ಲ, ಬದಲಿಗೆ ಮ್ಯಾರಥಾನ್ ಎಂದು ರೈಲ್ವೆ ಮತ್ತು ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ನಗರದ ಖಾಸಗಿ ಹೋಟೆಲಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರಪ್ರಥಮ 'ಸೆಮಿಕಾಮ್ ಇಂಡಿಯಾ' ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ವಿದ್ಯುನ್ಮಾನ ಮತ್ತು ಸೆಮಿ ಕಂಡಕ್ಟರ್ ಉದ್ಯಮದ ಪ್ರಮುಖ ಕೇಂದ್ರವಾಗಿ ಭಾರತವನ್ನು ರೂಪಿಸಲು ಯೋಜನೆಗಳು, ಪ್ರಯತ್ನಗಳು ನಡೆಯುತ್ತಿದೆ. ನಮ್ಮ ಅನುಕೂಲಕರ ನೀತಿಗಳ ಜೊತೆಗೆ ಸೆಮಿ ಕಂಡಕ್ಟರ್ ಉದ್ಯಮಕ್ಕಾಗಿ 85 ಸಾವಿರ ನುರಿತ ತರಬೇತಿ ಪಡೆದ ಮತ್ತು ಉತ್ಪಾದನಾ ಸನ್ನದ್ಧ ಕಾರ್ಯಪಡೆಯನ್ನು ರಚಿಸಲು ಸರಕಾರ ಮುಂದಾಗಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ವಲಯ ಮುಂದಿನ ಹಂತದ ಬೆಳವಣಿಗೆಗೆ ನಿರ್ಣಾಯಕ: ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ವಲಯವು ನಮ್ಮ ಮುಂದಿನ ಹಂತದ ಬೆಳವಣಿಗೆಯ ನಿರ್ಣಾಯಕ ಅಂಶವಾಗಿದೆ. ಈ ಬೆಳವಣಿಗೆಯನ್ನು ವೇಗವನ್ನು ಹೆಚ್ಚಿಸಲು, ನಾವು ಅನುಕೂಲಕರ ನೀತಿಗಳು ಮತ್ತು ಸಂಘಟಿತ ಪ್ರಯತ್ನವನ್ನು ಮಾಡಬೇಕಿದೆ. ಜೊತೆಗೆ ಉದ್ಯಮಗಳ ಸಹಯೋಗದಿಂದ ಬೆಂಬಲಿತವಾಗಿರುವ ಮಾರ್ಗಸೂಚಿಯನ್ನು ರೂಪಿಸಬೇಕು. ʻಸಬ್ ಕಾ ಸಾಥ್ʼ, ʻಸಬ್ ಕಾ ಪ್ರಯಾಸ್ʼ ಖಾತರಿಪಡಿಸುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಭಾಷಣ ಮಾಡಿದರು. ಸೆಮಿಕಂಡಕ್ಟರ್ ವಿಶ್ವದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತ ವಿಶ್ವದ ಸೆಮಿಕಂಡಕ್ಟರ್ ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಭಾರತದಲ್ಲಿ ಸುಮಾರು 80 ಬಿಲಿಯನ್ ಡಾಲರ್ ರೂ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿದೆ. ಯುವ ಭಾರತೀಯರನ್ನು ಮುಂದಿನ ಪೀಳಿಗೆಗೆ ತರಬೇತಿಗೊಳಿಸಲಾಗುತ್ತಿದೆ. ಟಾಪ್ 25 ಸೆಮಿಕಂಡಕ್ಟರ್ ಡಿಸೈನ್ ಸಂಸ್ಥೆಗಳು ಭಾರತದಲ್ಲಿದ್ದು, ಮುಂದಿನ ಐದು ವರ್ಷದಲ್ಲಿ 26 ಬಿಲಿಯನ್ ಡಾಲರ್ಸ್ ಹೂಡಿಕೆಯ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧ : ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ನಾವು ಉದ್ಯಮಕ್ಕೆ ನಿರಂತರ ಬೆಂಬಲ ನೀಡುತ್ತೇವೆ. ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಸಿದ್ದೇವೆ. ಉದ್ಯಮಿಗಳಿಂದ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ದರಿದ್ದೇವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿ ಬರಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಓದಿ : ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ: ಇಸ್ರೋದ 4,000 ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲು ಸರ್ಕಾರದ ನಿರ್ಧಾರ