ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ-1989 ಜಾರಿಗೆ ಮುನ್ನ ನಡೆದ ಕೃತ್ಯವನ್ನು ಕಾಯ್ದೆ ಜಾರಿಯಾದ ನಂತರ ಅಪರಾಧ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ನಿವಾಸಿ ಡಾ. ಶಾಂತರಾಜ್ ಟಿ.ಆರ್ ಮತ್ತಿತರರು ತಮ್ಮ ವಿರುದ್ಧ ದಾಖಲಿಸಿರುವ ಪಿಸಿಆರ್ ಹಾಗೂ ಈ ಮೇರೆಗೆ ತನಿಖೆಗೆ ಆದೇಶಿಸಿರುವ ಮ್ಯಾಜಿಸ್ಟ್ರೇಟ್ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ದೂರುದಾರರ ಆರೋಪದಂತೆ ಕೃತ್ಯವು 1975ರಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಆರೋಪಕ್ಕೆ ಸಂಬಂಧಿಸಿದಂತೆ 2013ರಲ್ಲಿ ಪಿಸಿಆರ್ ದಾಖಲಿಸಲಾಗಿದೆ. ದೂರು ದಾಖಲಿಸುವಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ. ಇನ್ನು ಅಪರಾಧ ನ್ಯಾಯಶಾಸ್ತ್ರದ ಪ್ರಕಾರ ಕೃತ್ಯ ನಡೆದ ಸಂದರ್ಭದಲ್ಲಿ ಅದು ಅಪರಾಧವಾಗದೇ ಇದ್ದು, ನಂತರದ ಶಾಸನದಲ್ಲಿ ಆ ಕೃತ್ಯ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ ಎಂಬ ಕಾರಣಕ್ಕೆ ಯಾವುದೇ ನಾಗರಿಕನನ್ನು ವಿಚಾರಣೆಗೆ ಗುರಿಪಡಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಗದಗ ಉಪ ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಆಸ್ತಿ ದಾಖಲೆ ಪತ್ತೆ
ಅಲ್ಲದೇ, ಪೆಪ್ಸಿ ಫುಡ್ ಲಿಮಿಟೆಡ್ ವರ್ಸಸ್ ಸ್ಪೆಷಲ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕ್ರಿಮಿನಲ್ ಕಾನೂನು ಆಕಸ್ಮಿಕ ಎಂಬಂತೆ ಚಲಾಯಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಸಿಆರ್ಪಿಸಿ ಸೆಕ್ಷನ್ 156ರ ಅಡಿ ಹೆಚ್ಚಿನ ತನಿಖೆಗೆ ಆದೇಶಿಸುವ ಮುನ್ನ ಈ ವಿಚಾರಗಳನ್ನು ಪರಿಗಣಿಸಿಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ, ದೂರುದಾರರು ಸಲ್ಲಿಸಿದ್ದ ಖಾಸಗಿ ದೂರು ಹಾಗೂ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸಲು ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ಗಳನ್ನು ರದ್ದುಪಡಿಸಿ ಆದೇಶಿಸಿದೆ.