ನವದೆಹಲಿ: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ(Gauri Lankesh Murder Case) ಆರೋಪಿ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಆರೋಪಗಳನ್ನು ಕೈಬಿಡುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 2021ರ ಸೆಪ್ಟೆಂಬರ್ 8 ರಂದು ಕೋಕಾ ಕಾಯ್ದೆಯಡಿ ಆರೋಪಗಳನ್ನು ಹಿಂದಕ್ಕೆ ಪಡೆಯಲಾಗಿತ್ತು.
ಕೆಸಿಒಸಿಎ ಅಡಿ ದಾಖಲಾಗಿದ್ದ ಕೇಸ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು. ಇದನ್ನು ಪಶ್ನಿಸಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸುಪ್ರೀಂ ಕೋರ್ಟ್ ಕೋಕಾ ಕಾಯ್ದೆಯಡಿ ಆರೋಪಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಎತ್ತಿಹಿಡಿದಿದೆ.
2021ರ ಸೆಪ್ಟೆಂಬರ್ 21 ರಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹುಝಾಫಾ ಅಹ್ಮದಿ ಅವರು ವಿವರವಾದ ಸಲ್ಲಿಕೆ ಮತ್ತು ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಕೋರ್ಟ್ ತನ್ನ ಆದೇಶಗಳನ್ನು ಕಾಯ್ದಿರಿಸಿತ್ತು.
2017ರಲ್ಲಿ ಸೆ.5ರಂದು ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಗೌರಿ ಲಂಕೇಶ್ ಅವರನ್ನು ಮನೆಯ ಬಾಗಿಲ ಬಳಿಯೇ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು.