ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ನಗರದ ಕೇಂದ್ರ ಕಾರಾಗೃಹದಲ್ಲಿ ಜೈಲುಶಿಕ್ಷೆ ಅನುಭವಿಸಿರುವ ಶಶಿಕಲಾ ಮೊನ್ನೆ ಕೊರೊನಾ ಸೋಂಕಿಗೂ ತುತ್ತಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ನಟರಾಜನ್ ನಾಳೆಯೂ ಬಿಡುಗಡೆಯಾಗುವ ಸಾಧ್ಯತೆ ಕಡಿಮೆಯಿದೆ.
ಕೊರೊನಾ ಹಿನ್ನೆಲೆಯಲ್ಲಿ ನಾಳೆ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಚ್ಚಾರ್ಜ್ ಮಾಡುವುದು ಅನುಮಾನವಾಗಿದೆ. ಮೂಲಗಳ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಶಶಿಕಲಾ ಕ್ವಾರಂಟೈನ್ನಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷೆ ಅವಧಿ ಮುಗಿದರೂ ಇನ್ನು ಮೂರು ದಿನ ಆಸ್ಪತ್ರೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ 4 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿತ್ತು. ಅವರು ಇತ್ತೀಚೆಗೆ 10 ಕೋಟಿ ರೂ. ದಂಡವನ್ನು ನ್ಯಾಯಾಲಯಕ್ಕೆ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ರೂಪದಲ್ಲಿ ಪಾವತಿಸಿದ್ದರು. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಜನವರಿ 27ರಂದು ಬಿಡುಗಡೆಯಾಗಲು ಅವಕಾಶಗಳಿದ್ದವು. ಆದರೆ, ಶಶಿಕಲಾ ಕೊರೊನಾ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಜೈಲಿನ ಕೆಲ ಪ್ರಕ್ರಿಯೆಗಳನ್ನು ಜೈಲಾಧಿಕಾರಿಗಳು ಅಲ್ಲಿಗೇ ತೆರಳಿ ಪ್ರಕ್ರಿಯೆ ಪೂರೈಸಲಿದ್ದಾರೆ. ಬಳಿಕ ಶಶಿಕಲಾಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ವಾಪಸ್ ತೆಗೆದಕೊಳ್ಳಲಿದ್ದಾರೆ.
ಶಶಿಕಲಾ ಜ.27 ರಂದು ಬಿಡುಗಡೆಯಾಗುವ ಸಂತಸದಲ್ಲಿದ್ದರು. ಇವರ ಪರ ವಕೀಲರು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರ ಕರೆತರಲು ಪೂರ್ವ ತಯಾರಿಯನ್ನೂ ನಡೆಸಿದ್ದಾರೆ. ಹೀಗಾಗಿ ಬುಧವಾರ ಜೈಲಾಧಿಕಾರಿಗಳ ಸಮ್ಮುಖದಲ್ಲಿ ಆಸ್ಪತ್ರೆಗೆ ತೆರಳಿ, ಶಶಿಕಲಾ ಸಹಿ ಪಡೆದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಗಳೂ ಇವೆ. ಇದೀಗ ಜೈಲಿನಿಂದ ಬಿಡುಗಡೆಯಾಗುವ ಅವಕಾಶಗಳಿದ್ದರೂ, ಇದಕ್ಕೆ ಕೊರೊನಾ ಅಡ್ಡಿಯಾಗಿದೆ.
ಕೊರೊನಾ ಸೋಂಕಿನೊಂದಿಗೆ ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ ಶಶಿಕಲಾ ನಟರಾಜನ್ ಆರೋಗ್ಯ ಸದ್ಯ ಸ್ಥಿರವಾಗಿದೆ. ಅವರಿಗೆ ಕೋವಿಡ್ ನಿಯಮದ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.