ಬೆಂಗಳೂರು : ಇಂದು ನಾಡಿಗೆ ಸಂಕ್ರಾಂತಿ ಸಂಭ್ರಮ. ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. ಹೀಗಾಗಿ, ನಗರದ ಶ್ರೀ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಐತಿಹಾಸಿಕ ಕೌತುಕ ಕಣ್ತುಂಬಿಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಸಂಜೆ 5 :14 - 5:17ರ ಸಮಯದಲ್ಲಿ ಸೂರ್ಯ ರಶ್ಮಿ ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಲಿದೆ. ಸೂರ್ಯ ರಶ್ಮಿ ಸ್ಪರ್ಶ ಕಾಲದಲ್ಲಿ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ನೀಡಿಲ್ಲ.
ಕೋವಿಡ್ ಹಿನ್ನೆಲೆ ಶ್ರೀ ಗವಿಗಂಗಾಧರನ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ಪ್ರವೇಶ ನಿಷೇಧವಾಗಿದೆ. ಅದಕ್ಕಾಗಿಯೇ ಭಕ್ತರು ಇಂದು ಬೆಳಗ್ಗೆಯೇ ಬಂದು ದೇವರ ದರ್ಶನ ಪಡೆದರು. ಇಂದು ನಸುಕಿನ ಜಾವ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಭಕ್ತಾದಿಗಳಿಗೆ ದೇಗುಲಕ್ಕೆ ಪ್ರವೇಶಕ್ಕೆ ಅನುಮತಿ ಇತ್ತು. ಬೆಳಗ್ಗೆಯೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಗಿದೆ. ದೇಗುಲ ಮುಂಭಾಗದಲ್ಲಿಯೂ ಜನ ಸೇರದಂತೆ ವ್ಯವಸ್ಥೆ ಮಾಡಲಾಗಿದೆ.
ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ಎಲ್‌ಇಡಿ ವಾಲ್ ಅಳವಡಿಕೆಗೂ ಅವಕಾಶ ಇಲ್ಲ. ದೇವಾಲಯದ ಮುಂದೆ ಬ್ಯಾನರ್ ಹಾಕಿ ದರ್ಶನ ನಿಷೇಧದ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಮಿಕ್ರಾನ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಜನದಟ್ಟಣೆ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ. ನಿರಂತರ ಮೂರು ದಿನ ದೇವರ ದರ್ಶನಕ್ಕೆ ಅವಕಾಶ ಇಲ್ಲ.
ಇದನ್ನೂ ಓದಿ: ಅಪಾರ್ಟ್ಮೆಂಟ್ನಲ್ಲಿ 10 ಕೋವಿಡ್ ಸೋಂಕಿತರಿದ್ದರೂ ಸಂಪೂರ್ಣ ಕಟ್ಟಡ 7 ದಿನ ಕಂಟೈನ್ಮೆಂಟ್!
ಇಂದು ಉತ್ತರಾಯಾಣ ಪುಣ್ಯಕಾಲ ಆರಂಭವಾಗ್ತಿದ್ದಂತೆ ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದೆ.