ಬೆಂಗಳೂರು : ಬ್ಲ್ಯಾಕ್ಲಿಸ್ಟ್ನಲ್ಲಿರುವ ಎಸ್ಎಂ ಫಾರ್ಮಾಸಿಟಿಕಲ್ ಕಂಪನಿಗೆ ಸ್ಯಾನಿಟೈಸರ್ ಪೂರೈಸುವ ಗುತ್ತಿಗೆ ನೀಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ಎಂ ಫಾರ್ಮಾಸಿಟಿಕಲ್ ಕಂಪನಿ ಸರಬರಾಜು ಮಾಡುವ ಸ್ಯಾನಿಟೈಸರ್ ಕಳಪೆಯಾಗಿದೆ. ಕಂಪನಿ ಬ್ಲಾಕ್ ಲಿಸ್ಟ್ನಲ್ಲಿದೆ. ಅಲ್ಲದೆ ಈ ಕುರಿತು ದೂರುಗಳು ಕೂಡಾ ಬಂದಿವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸರ್ಕಾರದ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಆಗಿದೆ ಎಂದು ವಿವರಣೆ ನೀಡಿದ್ದಾರೆ. ಪಿಎಸಿ ಸಭೆಯಿಂದ ಹಲವು ಸೂಚನೆ ಕೊಟ್ಟಿದ್ದೇವೆ. ಎಲ್ಲಾ ದಾಖಲೆಗಳನ್ನು ನೀಡಬೇಕು ಎಂದು ಆರೋಗ್ಯ ಇಲಾಖೆಗೆ ಹೇಳಿದ್ದೇವೆ ಎಂದರು.
ಬೆಂಗಳೂರಿನ ಹೊಸಕೋಟೆಯಲ್ಲಿರುವ ಈ ಕಂಪನಿಯ ಸ್ಯಾನಿಟೈಸರ್ ಗುಣಮಟ್ಟದ ಕುರಿತು ಸರ್ಕಾರಿ ಲ್ಯಾಬ್ನಲ್ಲಿ ನಕಾರಾತ್ಮಕ ರಿಪೋರ್ಟ್ ಬಂದಿದೆ. ಇಂತಹ ಕಂಪನಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸ್ಯಾನಿಟೈಸರ್ ಪೂರೈಸಲು ಆರ್ಡರ್ ನೀಡಿದ್ದು, ಈ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ಮಾಡುತ್ತಿದೆ ಎಂದು ತಿಳಿಸಿದರು.
40,000 ಸ್ಯಾಂಪಲ್ ರಿಸಲ್ಟ್ ಬರಲು ಬಾಕಿ : ರಾಜ್ಯದಲ್ಲಿ ಸುಮಾರು 40,000ಕ್ಕೂ ಹೆಚ್ಚು ಸ್ಯಾಂಪಲ್ಗಳ ವರದಿ ಬರುವುದು ಬಾಕಿ ಇದೆ. ಸುಮಾರು10 ದಿನಗಳಿಂದ ಕೋವಿಡ್ ಪರೀಕ್ಷೆಗಾಗಿ ಸ್ಯಾಂಪಲ್ ಪಡೆದ್ರೂ ಅದರ ರಿಸಲ್ಟ್ ಇನ್ನೂ ಬಂದಿಲ್ಲ. ಈ ರೀತಿ ನಮ್ಮ ರಾಜ್ಯದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ತುರ್ತು ವಿಶೇಷ ನೇಮಕಾತಿ ಮಾಡಿ : ರಾಜ್ಯದಲ್ಲಿ ವೈದ್ಯರು, ನರ್ಸ್ ಹಾಗೂ ಪೌರಕಾರ್ಮಿಕರ ಕೊರತೆ ಇದೆ. ಇದನ್ನು ನೀಗಿಸಲು ಎಮರ್ಜೆನ್ಸಿ ಸ್ಪೆಷಲ್ ರಿಕ್ರ್ಯೂಟ್ಮೆಂಟ್ ಪ್ರಾರಂಭ ಮಾಡಬೇಕು ಎಂದರು. ನಾಲ್ಕೈದು ಆಸ್ಪತ್ರೆಗೆ ಅಲೆದು ಅಲೆದು ಸಿಬ್ಬಂದಿ ಇಲ್ಲದೆ ಸತ್ತಿದ್ದಾರೆ. ಬೆಂಗಳೂರು ನ್ಯೂಯಾರ್ಕ್, ಇಟಲಿ ಆಗಬಾರದು. ಸದಾ ವೈದ್ಯರ ತಂಡ ಸಿದ್ಧ ಇರಬೇಕು, ಆ್ಯಂಬುಲೆನ್ಸ್ ಕೊರತೆ ಇದೆ, ಬಿಎಂಟಿಸಿ ಬಸ್ಗಳು ಬೇಕಾದಷ್ಟು ಇವೆ. ಅವುಗಳನ್ನು ಕನ್ವರ್ಟ್ ಮಾಡಿ, ಬಳಸಿಕೊಳ್ಳಿ ಎಂದು ಆಗ್ರಹಿಸಿದರು.