ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಆಶೋತ್ತರಗಳನ್ನು ವ್ಯಕ್ತಪಡಿಸಲು ನಮ್ಮನ್ನು ಆರಿಸಿ ಕಳಿಸಿದ್ದಾರೆ. ಜನರ ಸಮಸ್ಯೆ ಕುರಿತು ಚರ್ಚೆ ಆಗಬೇಕು. ಸಿಡಿ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಕಾಲಹರಣ ಮಾಡುತ್ತಿವೆ ಎಂದು ಶಾಸಕ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಹಗರಣ ಆಗಿದ್ದರೆ ಚರ್ಚೆ ಆಗಬೇಕು. ಇಡೀ ದಿನ ಕಲಾಪ ವ್ಯರ್ಥವಾಗಿದೆ. ಆದರೆ ಸಿಡಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವಿವರವಾಗಿ ತಿಳಿಸಿದ್ದಾರೆ. ಸರ್ಕಾರ ಸಹ ಉತ್ತರ ಕೊಟ್ಟಿದೆ. ಅದರ ತನಿಖೆ ಕೂಡ ನಡೆಯುತ್ತಿದ್ದು, ತನಿಖೆ ನಡೆಯಲು ಬಿಡಬೇಕು ಎಂದರು.
ಜನತೆಯ ಆಶೋತ್ತರಗಳನ್ನು ವ್ಯಕ್ತಪಡಿಸಲು ಸದನಕ್ಕೆ ಬಂದಿದ್ದೇವೆ. ಸರ್ಕಾರ ತಪ್ಪು ಮಾಡಿದ್ದರೆ, ಹಗರಣದಲ್ಲಿ ಸಿಲುಕಿದ್ದರೆ, ಅದರ ಬಗ್ಗೆ ಚರ್ಚಿಸಿ ಪರಾಮರ್ಶೆ ನಡೆಸಬೇಕು ಎಂದು ಹೇಳಿದರು. ಸಿಡಿ ಪ್ರಕರಣದ ಬಗ್ಗೆ ಪ್ರತಿಪಕ್ಷದ ನಾಯಕರು ನಿನ್ನೆ ಕೂಲಂಕಷವಾಗಿ ಚರ್ಚಿಸಿದ್ದಾರೆ. ಅದಕ್ಕೆ ಸರ್ಕಾರವೂ ಅವರಿಗೆ ಉತ್ತರ ನೀಡಿದೆ. ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಸರ್ಕಾರ ಮಾಡುತ್ತಿದೆ. ಅದಕ್ಕೂ ಮೀರಿ ಸರ್ಕಾರ ತಪ್ಪು ಎಸಗಿದರೆ ಅದರ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ನಾನು ಮೊದಲ ಬಾರಿಗೆ ಶಾಸಕನಾಗಿ ಬಂದಿದ್ದೇನೆ. ಸದನದಲ್ಲಿ ಮಾತನಾಡಲು ಸಿದ್ಧತೆ ಮಾಡಿಕೊಂಡು ಬಂದಿದ್ದೆ. ಅದರಲ್ಲೂ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಇಂತಹ ನಡವಳಿಕೆ ಇಂದು ನನಗೆ ಬೇಸರ ತರಿಸಿದೆ ಎಂದರು.