ಬೆಂಗಳೂರು : ಕೆಲ ನಿರ್ಬಂಧ ಎದುರಾಗುವ ಹಿನ್ನೆಲೆ ಪೊಲೀಸ್ ಕೆಲಸದಲ್ಲಿ ನಿರತರಾಗಿರುವ ನಿವೃತ್ತ ಸೈನಿಕರಿಗೆ 7 ವರ್ಷಕ್ಕೆ ಮುನ್ನ ವರ್ಗಾವಣೆ ನೀಡುವುದು ಕಷ್ಟವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ಮರು ನೇಮಕಾತಿಗೊಂಡಿರುವ ನಿವೃತ್ತ ಸೇನಾಧಿಕಾರಿಗಳ ಸಮಸ್ಯೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಂದರ್ಭ, ಪೊಲೀಸ್ ಕೆಲಸಕ್ಕೆ ನೇಮಿಸುವಾಗ ವಲಯ, ಪ್ರದೇಶವಾರು ನೋಟಿಫಿಕೇಷನ್ ನೀಡುತ್ತೇವೆ. ಶೇ.10ರಷ್ಟು ವಿಶೇಷ ಅವಕಾಶ ಇದೆ ಎಂದರು.
ನೇಮಕಾತಿ ವಯೋಮಾನ 40 ವರ್ಷ ಮಾಡಲಾಗಿದೆ. ಹಿಂದೆ ಈ ವ್ಯವಸ್ಥೆ ಇರಲಿಲ್ಲ. ಈಗ ಪರಿಶೀಲಿಸಿ 7 ವರ್ಷಕ್ಕೆ ಇಳಿಸಲಾಗಿದೆ. ಅವರಿಗೆ ಸೇವೆ ಸಲ್ಲಿಸುವ ವಯೋಮಾನದ ಅವಕಾಶ ಕಡಿಮೆ ಇರುತ್ತದೆ. 2 ವರ್ಷ ಕಾಲಮಿತಿ ಪತಿ-ಪತ್ನಿ ಒಟ್ಟಾಗಿ ಇರಲು ಅವಕಾಶ ಕಲ್ಪಿಸಲಾಗಿದೆ. ಇವರಿಗೆ ನೀಡುವ ಸವಲತ್ತನ್ನು ಉಳಿದವರೂ ಕೇಳುತ್ತಾರೆ. ಹೀಗಾಗಿ, ವಿಶೇಷ ಸವಲತ್ತು ಕಲ್ಪಿಸಲು ಸಾಧ್ಯವಿಲ್ಲ.
ಮಂಗಳೂರು ಭಾಗದಲ್ಲಿ ತುಳು-ಬ್ಯಾರಿ ಭಾಷೆ ಮಾತನಾಡುವವರು ಜಾಸ್ತಿ. ಇಲ್ಲಿ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕುವವರು ಕಡಿಮೆ. ಉತ್ತರ ಕರ್ನಾಟಕ ಭಾಗದವರು ಹೆಚ್ಚಾಗಿ ಬರುತ್ತಾರೆ. ತವರಿಗೆ ವರ್ಗಾವಣೆ ತಕ್ಷಣ ನೀಡಿದರೆ ಕೆಲ ಭಾಗದಲ್ಲಿ ಸಿಬ್ಬಂದಿ ಕೊರತೆ ಎದುರಾಗಲಿದೆ ಎಂದರು. ಅಪಾಯ ಭತ್ಯೆ ನೀಡಿಕೆ ಪೊಲೀಸರು ಕಾರ್ಯ ನಿರ್ವಹಿಸುವ ತಾಣ ಆಧರಿಸಿ ನೀಡುತ್ತೇವೆ.
20 ಸಾವಿರ ಎರಡು ಹಾಸಿಗೆ ಮನೆಗಳನ್ನು ನಿರ್ಮಿಸಿದ್ದೇವೆ. 200 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆ ನಿರ್ಮಿಸುತ್ತಿದ್ದೇವೆ. ಇದಾದ ಬಳಿಕ ಕೇವಲ 3-4 ಠಾಣೆಗಳು ಮಾತ್ರ ಶೆಡ್, ಬಾಡಿಗೆ ಕಟ್ಟಡದಲ್ಲಿ ಇರಲಿವೆ. ಇದುವರೆಗೂ ಪ್ರತಿ ವರ್ಷ 4-5 ಠಾಣೆಗಳು ಮಾತ್ರ ನಿರ್ಮಾಣಗೊಳ್ಳುತ್ತಿದ್ದವು ಎಂದು ವಿವರಿಸಿದರು.
ಹೈಗ್ರೌಂಡ್ ಪೊಲೀಸ್ ಠಾಣೆಗೆ ಅದರದ್ದೇ ಆದ ಏಳು ಗುಂಟೆ ಜಮೀನು ಇದೆ. ಅದು ಅವರಿಗೆ ತಿಳಿದಿರಲಿಲ್ಲ. ಈಗ ನಮ್ಮ ನಿವೇಶನ ಅಂತಾ ತಿಳಿದಿದೆ. ಆದಷ್ಟು ಬೇಗ ಇಲ್ಲಿ ನೂತನ ಠಾಣೆ ನಿರ್ಮಿಸುತ್ತೇವೆ. ಜಮೀನು ಸಂಬಂಧ ಇದ್ದ ವಿವಾದ ಬಗೆಹರಿದಿದೆ. ಮೈಸೂರಿನಿಂದ ದಾಖಲೆ ತರಿಸಿದ್ದೇವೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜಾಗ ಲಭಿಸಲಿದೆ. ಮಾಜಿ ಸೈನಿಕರಿಗೆ ಸಲ್ಲಿಸಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸುತ್ತೇವೆ ಎಂದರು.
ಉತ್ತರಕ್ಕೆ ಮುನ್ನ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡರು ಮಾತನಾಡಿ.. ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಇದೀಗ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಏಳು ವರ್ಷದವರೆಗೆ ನಿಯೋಜಿತರಾದ ಸ್ಥಳದಿಂದ ವರ್ಗಾವಣೆ ಸಿಗಲ್ಲ. ಇವರ ನೋವು ಅರಿತು ನಿಯಮ ಸಡಿಲಿಸಿ 2 ವರ್ಷಕ್ಕೆ ಇಳಿಸಬೇಕು. ಕುಟುಂಬದ ಜತೆ ಕಾಲ ಕಳೆಯುವ ಅವಕಾಶ ಕೊಡಬೇಕು. ಪೊಲೀಸರ ಕಷ್ಟ ಪರಿಹಾರ ಭತ್ಯೆ 2 ರಿಂದ ₹3 ಸಾವಿರಕ್ಕೆ ಹೆಚ್ಚಿಸಬೇಕು. ಇಎಲ್ ಸೌಲಭ್ಯವನ್ನು 15 ರಿಂದ 30 ದಿನಕ್ಕೆ ಹೆಚ್ವಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಪರಿಹರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು : ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ದೇಶ ಉಳಿಸುವ ಕೆಲಸ ಮಾಡುವ ಸೈನಿಕರು ರಾಜ್ಯಕ್ಕೆ ಬಂದು ಇಲ್ಲಿ ಪೊಲೀಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುವವರಿಗೆ ಪ್ರತ್ಯೇಕ ನಿಯಮ ಸರಿಯಲ್ಲ. ಪೊಲೀಸ್ ಇಲಾಖೆ ಬಹಳ ಕಷ್ಟಪಡುವ ಕೆಲಸ. ಔರಾದ್ಕರ್ ಆಯೋಗದಲ್ಲೂ ಕೆಲವರಿಗೆ ಅನ್ಯಾಯವಾಗಿದೆ. ಇದೂ ಸೇರಿದಂತೆ ವಿವಿಧ ಸಮಸ್ಯೆ ಪರಿಹರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಸವಲತ್ತು ವಿಚಾರದಲ್ಲಿ ನಿರ್ಲಕ್ಷ್ಯ ಬೇಡ : ಪ್ರತಿಪಕ್ಷ ಉಪನಾಯಕ ಡಾ. ಕೆ. ಗೋವಿಂದರಾಜ್ ಮಾತನಾಡಿ, ಆರ್ಮಿ ಕ್ಯಾಂಟೀನ್ ಮಾದರಿಯಲ್ಲಿ ಪೊಲೀಸ್ ಕ್ಯಾಂಟೀನ್, ಆಸ್ಪತ್ರೆ ಮಾಡಿ. ಪ್ರತಿ ವಿಭಾಗಕ್ಕೆ ಒಂದು ಆಸ್ಪತ್ರೆ ಆದರೂ ಸಾಕು. ಪೊಲೀಸ್ ಹೌಸಿಂಗ್ ಬೋರ್ಡ್‌ನಲ್ಲಿ ಹಣವಿದೆ. ಎಲ್ಲೆಡೆ ಸುಸ್ಥಿತಿಯಲ್ಲಿದೆ. ಸರಿಪಡಿಸಬೇಕೆಂದು ಕೋರುತ್ತೇನೆ. ಸೈನಿಕರಾಗಿ ಸೇವೆ ಸಲ್ಲಿಸಿ, ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಏಳು ವರ್ಷ ಬದಲು ವರ್ಗಾವಣೆ ಮಿತಿಯನ್ನು 3 ವರ್ಷಕ್ಕೆ ಇಳಿಸಿ. ಇವರ ಸವಲತ್ತು ವಿಚಾರದಲ್ಲಿ ನಿರ್ಲಕ್ಷ್ಯಬೇಡ. ರಿಯಾಯಿತಿ ತೋರಿಸಲೇಬೇಕು. ಪೊಲೀಸರು ಕಾನೂನಿನ, ರಕ್ಷಣೆಯ ಪ್ರತೀಕ. ಅವರಿಗೆ ಸ್ವಂತ ಜಿಲ್ಲೆಗೆ ತೆರಳಲು ಅವಕಾಶ ಮಾಡಿ ಕೊಡಬೇಕು ಎಂದರು.
ತುಳು ಭಾಷೆಗೆ ರಾಜ್ಯ ಭಾಷೆ ಮಾನ್ಯತೆ ನೀಡಬೇಕು : ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಹ ಶ್ರೀಕಂಠೇಗೌಡರ ಮಾತನ್ನು ಬೆಂಬಲಿಸಿದರು. ಪೊಲೀಸ್ ಇಲಾಖೆಯಲ್ಲಿ ಇರುವ ನಿವೃತ್ತ ಸೈನಿಕರಿಗೆ ಗೌರವ ನೀಡಬೇಕು. ಕೊಡವ ಮತ್ತು ತುಳು ಭಾಷೆಗೆ ರಾಜ್ಯ ಭಾಷೆ ಮಾನ್ಯತೆ ನೀಡಬೇಕು ಎಂದರು. ಸದಸ್ಯರಾದ ತೇಜಸ್ವಿನಿಗೌಡ, ಮಂಜುನಾಥ್ ಭಂಡಾರಿ, ಆಯನೂರು ಮಂಜುನಾಥ್, ಸಾಯಬಣ್ಣ ತಳವಾರ್ ಮಾತನಾಡಿದರು. ಸದಸ್ಯರ ಚರ್ಚೆಗೆ ಉತ್ತರಿಸಿದ ಗೃಹ ಸಚಿವರು, ಹಂತ ಹಂತವಾಗಿ ವರ್ಗಾವಣೆಗೆ ಕ್ರಮ ಕೈಗೊಳ್ಳುತ್ತೇವೆ. ಒಂದೇ ಸಾರಿ ವರ್ಗಾವಣೆ ಮಾಡಿದರೆ ಸಮಸ್ಯೆ ಆಗಲಿದೆ.
ಕ್ಯಾಂಟೀನ್, ಆಸ್ಪತ್ರೆ ಆಗುತ್ತಿದೆ. ಕಳಪೆ ಕಟ್ಟಡದ ಉದಾಹರಣೆ ತೋರಿಸಿದರೆ, ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆರ್ಡರ್ಲಿ ವ್ಯವಸ್ಥೆ ರದ್ದು, ಜನಪ್ರತಿನಿಧಿಗಳಿಗೆ ಪೊಲೀಸರ ನೇಮಕ ತೆಗೆದು ಹಾಕುವಂತೆ ನಾನು ಸಹ ಒತ್ತಡ ಹೇರಿದ್ದೇನೆ. ಕೆಲವರಿಗೆ ಮಾತ್ರ ಪೊಲೀಸರ ಅನಿವಾರ್ಯತೆ ಇದೆ. ಪ್ರತಿಷ್ಠೆಗೆ ಕೆಲವರು ಪೊಲೀಸರನ್ನು ಬಳಸುತ್ತಾರೆ. ತುಳು ಮತ್ತು ಕೊಡವ ಭಾಷೆ ಮಾನ್ಯತೆ ಬಗ್ಗೆ ಕೇಂದ್ರ ಸರ್ಕಾರದ ಜತೆ ಮಾತನಾಡುತ್ತೇವೆ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾದ ಅಗ್ನಿಶಾಮಕ ವಾಹನಗಳ ದುಸ್ಥಿತಿ